KARNATAKA
ಲೋಕಸಮರ @24 : ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ತಲೆನೋವು ತಂದ ಜಯಪ್ರಕಾಶ್ ಹೆಗ್ಡೆ..!
ಉಡುಪಿ / ಚಿಕ್ಕಮಗಳೂರು : ಲೋಕಸಭಾ ಚುನಾವಣೆ 2024 ಇನ್ನೇನು ಬಂದೇ ಬಿಡ್ತು, ಲೋಕ ಸಮರಕ್ಕೆ ರಾಜಕೀಯ ಪಕ್ಷಗಳು ಅಖಾಡಕ್ಕಿಳಿದು ಯುದ್ದಕ್ಕೆ ಸನ್ನದ್ದವಾಗುತ್ತಿವೆ. ಇದರ ಜೊತೆ ಪ್ರಮುಖ ಕ್ಷೇತ್ರಗಳಲ್ಲಿ ಅಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಗುತ್ತಿದೆ.
ಟಿಕೆಟ್ ಪಡೆಯಲು ಸಂಭಾವ್ಯ ಅಭ್ಯರ್ಥಿಗಳು ತಮ್ಮ ನಾನಾ ಕಸರತ್ತನ್ನ ಆರಂಭಿಸಿದ್ದಾರೆ. ಇದರಲ್ಲಿ ಒಂದು ಪ್ರಮುಖ ಕ್ಷೇತ್ರ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ. ಅಷ್ಟೊಂದು ಪ್ರಮುಖವಲ್ಲದ ಈ ಕ್ಷೇತ್ರದಲ್ಲಿ ಈ ಬಾರಿ ರಾಜಕೀಯ ಭಾರೀ ಕುತೂಹಲ ಘಟ್ಟಕ್ಕೆ ತಲುಪಿದೆ. ಬಿಜೆಪಿಯ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ರಾಜ್ಯದಲ್ಲಿ ಆಡಳಿತ ರೂಢವಾಗಿರುವ ಕಾಂಗ್ರೇಸ್ ಮತ್ತೆ ಪ್ರಾಬಲ್ಯ ಮೆರೆಯಲು ಕಾಯುತ್ತಿದೆ. 2009ರಲ್ಲಿ ಚಿಕ್ಕಮಗಳೂರು ಕ್ಷೇತ್ರದ ಪುನರ್ವಿಂಗಡಣೆ ನಡೆದು ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳನ್ನು ಸೇರಿಸಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ರೂಪುಗೊಂಡಿತ್ತು.
ಈ ವೇಳೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಡಿವಿ ಸದಾನಂದ ಗೌಡ ಅವರು ಕಾಂಗ್ರೇಸ್ ನ ಜಯಪ್ರಕಾಶ್ ಹೆಗ್ಡೆ ಅವರಿಗೆ ಸೋಲುಣಿಸಿದ್ದರು. ನಂತರ ಡಿವಿ ಅವರು ಸಿಎಂ ಆದ ಬಳಿಕ ನಡೆದ ಉಪ ಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಸುನಿಲ್ ಕುಮಾರ್ ಅವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಬಳಿಕ ನಡೆದ ಎರಡು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸಂಸದೆ ಶೋಭಾಕರಂದ್ಲಾಜೆ ಇಲ್ಲಿ ಜಯಭೇರಿ ಭಾರಿಸಿದ್ದಾರೆ .ಈ ನಡುವೆ ಕಾಂಗ್ರೇಸ್ ಬಿಟ್ಟು ಬಿಜೆಪಿ ಸೇರಿದ್ದ ಜಯಪ್ರಕಾಶ್ ಹೆಗ್ಡೆ ಅವರಿಗೆ ಬಿಜೆಪಿ ಟಿಕೇಟ್ ನೀಡದೆ ಎರಡನೇ ಬಾರಿ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿತ್ತು.
ಇದೀಗ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡದಿದ್ದರೆ ಮತ್ತೆ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ಸಿಗೆ ಸೇರುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ. ಈ ಬಗ್ಗೆ ಬೇಗ ನಿರ್ಧಾರ ತೆಗೆದುಕೊಳ್ಳಿ ಎನ್ನುತ್ತಿದೆ ಉಡುಪಿ ಜಿಲ್ಲಾ ಕಾಂಗ್ರೆಸ್. ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯಾಗಿರುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟಿಗಾಗಿ ಬಿಜೆಪಿಯಲ್ಲಿ ಭಾರಿ ಮಟ್ಟದ ಪೈಪೋಟಿ ಇದ್ದರೆ. ಕಾಂಗ್ರೇಸ್ ನಲ್ಲಿ ಮಾತ್ರ ಜಯಪ್ರಕಾಶ್ ಹೆಗ್ಡೆ ಅವರನ್ನು ನೆಚ್ಚಿಕೊಂಡು ಪಕ್ಷ ಇದೆ. ಈ ಮಧ್ಯೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟಿಕೆಟ್‌ಗಾಗಿ ಲಾಬಿ ನಡೆಸಿದ್ದು ಈಗಾಗಲೇ ಕ್ಷೇತ್ರದಲ್ಲಿ ಬಿರುಸಿನ ಓಡಾಟ ಆರಂಭಿಸಿದ್ದಾರೆ. ಇವರ ಜೊತೆ ಟಿಕೆಟ್ ಗಾಗಿ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ ಎಂಬ ಮಾಹಿತಿ ಬಂದಿದೆ.
ಜಯಪ್ರಕಾಶ್ ಹೆಗ್ಡೆಯವರಿಗೆ ಟಿಕೆಟ್ ನೀಡಲು ಸ್ಥಳೀಯವಾಗಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಸುಧೀರ್ ಕುಮಾರ್ ಮುರೋಳಿ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ವಿವಿಧ ಜಿಲ್ಲೆಗಳ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಸಂದರ್ಭದಲ್ಲಿ ವಿವರಿಸಿದ್ದಾರೆ. ಜಾತಿಗಣತಿಯ ವರದಿಯನ್ನು ಜಯಪ್ರಕಾಶ್ ಹೆಗ್ಡೆ ಮುಖ್ಯಮಂತ್ರಿಗೆ ಸಲ್ಲಿಸಿದ್ದರು. ಇದಕ್ಕಿಂತ ಮುನ್ನವೇ ಹೆಗ್ಡೆ, ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಮಾತು ಕ್ಷೇತ್ರದಿಂದ ಕೇಳಿ ಬರುತ್ತಿತ್ತು.
ಮೊದಲು ರಾಜಕೀಯಕ್ಕೆ ಬರುತ್ತೇನೋ ಇಲ್ಲವೋ ಎನ್ನುವುದನ್ನು ಆಲೋಚಿಸಬೇಕಿದೆ, ಆ ನಂತರ ಯಾವ ಪಕ್ಷ ಎಂದು ನಿರ್ಧರಿಸುವುದು ಎಂದು ಹೆಗ್ಡೆ ಇತ್ತೀಚೆಗೆ ಹೇಳಿದ್ದರು.ಉಡುಪಿ-ಚಿಕ್ಕಮಗಳೂರು ಎರಡು ಜಿಲ್ಲೆಗಳು ಹಿಂದುತ್ವದ ಜಿಲ್ಲೆಗಳು. ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯಲ್ಲಿ ಐದಕ್ಕೆ ಐದು ಬಿಜೆಪಿ ಗೆದ್ದಿದ್ರೆ, ಚಿಕ್ಕಮಗಳೂರಲ್ಲಿ ಐದಕ್ಕೆ ಐದು ಕಾಂಗ್ರೆಸ್ ಸೇರಿದೆ. ಬಿಜೆಪಿಯ ಶೋಭಾ ಕರಂದ್ಲಾಜೆಗೆ ಬಿಜೆಪಿಗರೇ ಮಾಡ್ತಿರೋ ಗೋ ಬ್ಯಾಕ್ ಶೋಭಕ್ಕ ಅಭಿಯಾನವನ್ನ ಕಾಂಗ್ರೆಸ್ಸಿಗೆ ಪ್ಲಸ್ ಮಾಡಿಕೊಳ್ಳೋ ಉತ್ಸುಕದಲ್ಲಿದ್ದಾರೆ.ಆದರೆ ಕಾಂಗ್ರೇಸ್ ಗೆ ಜಯಪ್ರಕಾಶ್ ಹೆಗ್ಡೆ ಅವರ ಎಸ್ ಆರ್ ನೋ ಇನ್ನೂ ತಲೆನೋವಾಗಿ ಪರಿಣಮಿಸಿದೆ. ಒಟ್ಟಾರೆಯಾಗಿ ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೇಸ್ ಗೆ ಒಂದೊಳ್ಳೆ ಅವಕಾಶ ಬಂದಿದೆ. ಅದನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ ಎನ್ನುವುದುನ್ನು ನೋಡಬೇಕಿದೆ.