KARNATAKA
ರಾಜ್ಯದ 60 ಕಡೆ 16 ಭ್ರಷ್ಟ ಅಧಿಕಾರಿಗಳ ಮನೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ, ಅಪಾರ ಪ್ರಮಾಣದಲ್ಲಿ ನಗ, ನಗದು , ಆಸ್ತಿ ಪತ್ತೆ..!
ಬೆಂಗಳೂರು : ರಾಜ್ಯದ 60 ಕಡೆ ಭ್ರಷ್ಟ 16 ಅಧಿಕಾರಿಗಳ ಮನೆ ಕಚೇರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಅಪಾರ ಪ್ರಮಾಣದಲ್ಲಿ ನಗ ನಗದು, ಆಸ್ತಿ ಪತ್ತೆಯಾಗಿದೆ. 13 ಮಂದಿ ಎಸ್ಪಿಗಳು, 12 ಮಂದಿ ಡಿವೈಎಸ್ಪಿಗಳು, 25 ಪಿಐಗಳು ಸೇರಿದಂತೆ 130 ಅಧಿಕಾರಿಗಳು ಲೋಕಾಯುಕ್ತ ದಾಳಿಗಳಲ್ಲಿ ಭಾಗಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಮಹಾನಗರಪಾಲಿಕೆ ಚೀಫ್ ಎಂಜಿನಿಯರ್ ರಂಗನಾಥ್ ಎಸ್.ಪಿ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬ್ಯಾಟರಾಯನಪುರ- ಯಲಹಂಕ ವಲಯದ ಅಧಿಕಾರಿಯಾಗಿರುವ ರಂಗನಾಥ್‌ಗೆ ಸೇರಿದ ಐದು ಸ್ಥಳಗಳಲ್ಲಿ ದಾಳಿ ನಡೆದಿದೆ. ಬೆಂಗಳೂರು, ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ವಿಜಯಪುರ ಜಿಲ್ಲೆಗಳಲ್ಲೂ ದಾಳಿ ನಡೆಸಿ ಶೋಧಕಾರ್ಯ ನಡೆಸ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಏಕಕಾಲಕ್ಕೆ ನಾಲ್ಕು ಕಡೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಕಾರಂಜಾ ಇಲಾಖೆಯ ಅಧಿಕಾರಿಯ ನಿವಾಸಗಳು, ಕಚೇರಿ ಮೇಲೆ ದಾಳಿಯಾಗಿದೆ. ಕಾರಂಜಾ ಅಧಿಕಾರಿ ಶಿವಕುಮಾರ್ ಸ್ವಾಮಿ ನಿವಾಸ ಹಾಗೂ ಕಚೇರಿ ಮೇಲೆ ದಾಳಿಯಾಗಿದೆ. ಲೋಕಾಯುಕ್ತ ಎಸ್‌ಪಿ ಆಂಟ್ಯೋನಿ ಜಾನ್ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್‌ಪಿ ಎನ್‌ಎಮ್.ಓಲೇಕಾರ್ ನೇತೃತ್ವದಲ್ಲಿ ದಾಳಿಯಾಗಿದೆ. ಚಿಕ್ಕಬಳ್ಳಾಫುರ ಕೆ.ಆರ್.ಡಿ.ಎಲ್ ನ ಇ.ಇ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಎಕ್ಸಿಕ್ಯೂಟೀವ್ ಇಂಜಿನಿಯರ್ ಸದಾಶಿವಯ್ಯಗೆ ಸೇರಿದ ಆಸ್ತಿ-ಪಾಸ್ತಿ ಮೇಲೆ ದಾಳಿಯಾಗಿದೆ. ಬೆಂಗಳೂರಿನ ಬಿಬಿಎಂಪಿಯ ಚೀಫ್ ಇಂಜಿನೀಯರ್ ರಂಗನಾಥ್ ಮನೆ ಮೇಲೆ ದಾಳಿಯಾಗಿದೆ. ಸದಾಶಿವನಗರದ ಮನೆಗೆ 5 ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸ್ತಿದ್ದಾರೆ. ಮಂಡ್ಯದಲ್ಲಿ ಅಕ್ರಮ ಆಸ್ತಿಗಳಿಕೆ ಆರೋಪ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಲೆಕ್ಕಸಹಾಯಕನ ಮನೆ, ಕಚೇರಿ ಮೇಲೆ ದಾಳಿಯಾಗಿದೆ. ಅಗಸನಪುರ ಗ್ರಾಮ ಪಂಚಾಯತಿ ಲೆಕ್ಕಸಹಾಯಕ ಕೃಷ್ಣೇಗೌಡ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಕೊಡಗಿನ ಕುಶಾಲನಗರದ ಎರಡು ಕಡೆಗಳಲ್ಲಿ ಲೋಕಾಯುಕ್ತ ದಾಳಿಯಾಗಿದೆ. ಸೋಮವಾರಪೇಟೆ ಇಓ ಜಯಣ್ಣ ಹಾಗೂ ಅಸಿಟೆಂಟ್ ಇಂಜಿನಿಯರ್ ಫಯಾಜ್ ಅಹಮದ್ ಮನೆ ಮೇಲೂ ಲೋಕಾಯುಕ್ತ ದಾಳಿಯಾಗಿದೆ. ಧಾರವಾಡದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಮಹೇಶ್ ಹಿರೇಮಠ ಮನೆ ಮೇಲೆ ದಾಳಿ ನಡೆಸಿ ಶೋಧಕಾರ್ಯ ನಡೆಸ್ತಿದ್ದಾರೆ. ಮೈಸೂರಿನಲ್ಲಿ ಲೊಕಾಯುಕ್ತ ಎಸ್.ಪಿ. ಸಜಿದ್ ಕುಮಾರ್ ನೇತೃತ್ವದಲ್ಲಿ 12 ಕಡೆ ದಾಳಿಯಾಗಿದೆ. ಬಿಡದಿಯ ಮಂಚನಾಯಕನಹಳ್ಳಿ ಗ್ರಾಮ ಪಿಡಿಒ ಯತೀಶ್ ನಿವಾಸದ ಮೇಲೆ ದಾಳಿಯಾಗಿದೆ. ಪಿಡಿಒ ಯತೀಶ್ ಅವರನ್ನು ಲೋಕಾಯುಕ್ತರು ವಶಕ್ಕೆ ಪಡೆದಿದ್ದಾರೆ. ಮೈಸೂರು, ಚನ್ನಪಟ್ಟಣದಲ್ಲಿ ಮನೆಗಳನ್ನ ಹೊಂದಿರು ಆರೋಪ ಇದೆ. ಬೆಸ್ಕಾಂ ಇಂಜಿನಿಯರ್ ಒಬ್ಬರ ನಿವಾಸದ ಮೇಲೂ ದಾಳಿಯಾಗಿದೆ ಎನ್ನಲಾಗಿದೆ.