DAKSHINA KANNADA
ಬೆಂಗಳೂರಿನ ಕೆ.ಆರ್ ಪುರ ತಹಸೀಲ್ದಾರ್ ಅಜಿತ್ ಕುಮಾರ್ ರೈ ಪುತ್ತೂರಿನ ಮನೆ ಮೇಲೆ ಲೋಕಾಯುಕ್ತ ದಾಳಿ – ಕಂತೆ ಕಂತೆ ನೋಟ್ ಪತ್ತೆ.
ಪುತ್ತೂರು, ಜೂನ್ 28: ಬೆಂಗಳೂರಿನ ಕೆ.ಆರ್.ಪುರ ತಹಶೀಲ್ದಾರ್ ಹುದ್ದೆಯಲ್ಲಿದ್ದ ಕೆಎಎಸ್ ಅಧಿಕಾರಿ ಅಜಿತ್ ಕುಮಾರ್ ರೈ ಪುತ್ತೂರು ತಾಲ್ಲೂಕು ಸೊರಕೆ ಮನೆ ಮತ್ತು ಅವರ ನಿಕಟವರ್ತಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ಶೋಧ ನಡೆಸುತ್ತಿದ್ದಾರೆ. ಬೃಹತ್ ಪ್ರಮಾಣದ ಹಣದ ಕಂತೆಯೇ ಸಿಕ್ಕಿದೆ ಎಂದು ವರದಿಯಾಗಿದೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಪೊಲೀಸರು ಅಜಿತ್ ಕುಮಾರ್ ರೈ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಲೋಕಾಯುಕ್ತ ಎಸ್ ಪಿ ಕೆ.ವಿ. ಅಶೋಕ್ ನೇತೃತ್ವದಲ್ಲಿ ಅಜಿತ್ ಅವರ ಮನೆ ಹಾಗೂ ಇತರ ಹತ್ತು ಸ್ಥಳಗಳ ಮೇಲೆ ಬುಧವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ಅಜಿತ್ ಕುಮಾರ್ ಅವರ ಮನೆಯಲ್ಲಿ ಬೃಹತ್ ಪ್ರಮಾಣದ ನೋಟಿನ ಕಂತೆಯೇ ಪತ್ತೆಯಾಗಿದೆ. ಅದನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಕರ್ತವ್ಯದಲ್ಲಿದ್ದ ತಂದೆ ನಿಧನವಾದ ಕಾರಣ ಅಜಿತ್ ಕುಮಾರ್ ರೈ ಗೆ ಸರ್ಕಾರಿ ಕೆಲಸ ದೊರಕಿತ್ತು. ಅಜಿತ್ ಕುಮಾರ್ ರೈ ತಂದೆ ಆನಂದ ರೈ ಸರ್ವೇಯರ್ ಆಗಿ ಕರ್ತವ್ಯದಲ್ಲಿದ್ದರು. ಪುತ್ತೂರಿನ ಸರ್ವೆಯ ಸೊರಕೆಯವರಾದ ಅಜಿತ್ ಕುಮಾರ್ ರೈ ಈ ಹಿಂದೆ ಒತ್ತುವರಿದಾರರಿಗೆ ಸಹಕರಿಸಿದ್ದ ಆರೋಪದ ಮೇಲೆ ಅಮಾನತುಗೊಳಗಾಗಿದ್ದರು.