LATEST NEWS
ಜೂನ್ 7 ರವರೆಗೆ ಉಡುಪಿ ಜಿಲ್ಲೆಯ 35 ಗ್ರಾಮಗಳು ಸಂಪೂರ್ಣ ಲಾಕ್ ಡೌನ್
ಉಡುಪಿ ಜೂನ್ 1: ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಹಿನ್ನಲೆ 50ಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಪ್ರಕರಣಗಳಿರುವ ಗ್ರಾಮಗಳನ್ನು ನಾಳೆಯಿಂದ ಜೂನ್ 7ರವರೆಗೆ ಸಂಪೂರ್ಣ ಲಾಕ್‌ಡೌನ್ ಮಾಡಲು ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದೆ.
ಶಿರೂರು, ಜಡ್ಕಲ್, ಕಂಬದಕೋಣೆ, ನಾಡ, ಕಾವ್ರಾಡಿ, ಹೊಂಬಾಡಿ, ಮಂಡಾಡಿ, ಕೋಟೇಶ್ವರ, ಹಾಲಾಡಿ, ಇಡೂರು ಕುಂಜ್ಞಾಡಿ, ಆಜ್ರಿ, ಆಲೂರು, 38 ಕಳ್ತೂರು, 80 ಬಡಗಬೆಟ್ಟು, ಅಲೆವೂರು, ಪೆರ್ಡೂರು, ತೆಂಕನಿಡಿಯೂರು, ಬೊಮ್ಮರಬೆಟ್ಟು, ಬೆಳಪು, ಬೆಳ್ಳೆ, ಪಡುಬಿದ್ರಿ, ಶಿರ್ವ, ಮಾಳ, ಈದು, ಕುಕ್ಕುಂದೂರು, ಕಡ್ತಲ, ಮರ್ಣೆ, ಪಳ್ಳಿ, ನಿಟ್ಟೆ, ಮಿಯಾರು, ಬೆಳ್ಮಣ್, ಬೆಳ್ವೆ, ಮುದ್ರಾಡಿ, ವರಂಗ ಗ್ರಾಮಗಳಲ್ಲಿ 5 ದಿನಗಳ ಕಾಲ ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಹಿನ್ನಲೆ ಲಾಕ್ ಡೌನ್ ಆಗಲಿರುವ ಗ್ರಾಮಗಳಲ್ಲಿ ಒಂದು ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿ ನಾಳೆಯಿಂದ ಜೂನ್ 7 ರ ವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೋಮವಾರ ವಿಡಿಯೋ ಸಂವಾದದ ಮೂಲಕ ನಡೆದ ಜಿಲ್ಲೆಯ ಕೋವಿಡ್ ಸ್ಥಿತಿಗತಿ ಕುರಿತು ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಸೂಚನೆ ನೀಡಿದ್ದರು. ಗ್ರಾಮೀಣ ಪ್ರದೇಶದಲ್ಲಿ 50ಕ್ಕೂ ಸಕ್ರಿಯ ಪ್ರಕರಣಗಳಿರುವ ಗ್ರಾಮ ಪಂಚಾಯಿತಿಗಳನ್ನು ಅಗತ್ಯ ವಸ್ತುಗಳ ಖರೀದಿಗೆ ಒಂದು ದಿನ ಕಾಲಾವಕಾಶ ನೀಡಿ, ಬುಧವಾರದಿಂದ ಭಾನುವಾರದವರೆಗೆ ಸಂಪೂರ್ಣ ಲಾಕ್‌ಡೌನ್ ಮಾಡುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದರು.
ಜಿಲ್ಲೆಯಲ್ಲಿ ಪ್ರಸ್ತುತ 35 ಗ್ರಾಮ ಪಂಚಾಯತ್ ಗಳಲ್ಲಿ 50 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಈ ಗ್ರಾಮ ಪಂಚಾಯತ್ ಗಳನ್ನು ಬುಧವಾರದಿಂದ ಭಾನುವಾರದ ವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದು, ಈ ಅವಧಿಯಲ್ಲಿ ಔಷಧ ಅಂಗಡಿ ಮತ್ತು ಕೃಷಿ ಚಟುವಟಿಕೆಗೆ ಮಾತ್ರ ಅವಕಾಶವಿದ್ದು, ಗ್ರಾಮಗಳ ಗಡಿಯನ್ನು ಬ್ಯಾರಿಕೇಡ್ ಮೂಲಕ ಮುಚ್ಚಲು ಕ್ರಮ ಕೈಗೊಳ್ಳಲಾಗುವುದ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಅಲ್ಲದೇ ಪ್ರತೀದಿನದ ಕೋವಿಡ್ ವರದಿಯನ್ವಯ 50 ಕ್ಕೂ ಹೆಚ್ಚು ಸಕ್ರಿಯ ಪಾಸಿಟಿವ್ ಪ್ರಕರಣ ಇರುವ ಗ್ರಾಮ ಪಂಚಾಯತ್ ಗಳನ್ನೂ ಸಹ ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದು ಎಂದು ಡಿಸಿ ಹೇಳಿದರು.