DAKSHINA KANNADA
ಫೀಲ್ಡಿಗಿಳಿದ ನಗರ ಪೊಲೀಸ್ ಆಯುಕ್ತ ಶಶಿಕುಮಾರ್: ಲಾಕ್ಡೌನ್ ಮತ್ತಷ್ಟು ಬಿಗಿ, ಅನಗತ್ಯ ಸಂಚಾರಕ್ಕೆ ಬ್ರೇಕ್

ಮಂಗಳೂರು, ಮೇ 22: ರಾಜ್ಯದಲ್ಲಿ 14 ದಿನಗಳ ಕಾಲ ಲಾಕ್ಡೌನ್ ವಿಸ್ತರಿಸಿರುವ ಬೆನ್ನಲ್ಲೇ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರು ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಸ್ವತಃ ಫೀಲ್ಡಿಗಿಳಿದು ಅನಗತ್ಯ ಸಂಚಾರ ನಡೆಸುತ್ತಿರುವವರ ವಾಹನಗಳನ್ನು ಸೀಜ್ ಮಾಡಿ ಪ್ರಕರಣ ದಾಖಲಿಸಿದ್ದಾರೆ. ನಗರದ ಸರ್ಕ್ಯೂಟ್ ಹೌಸ್ ಪ್ರದೇಶದಲ್ಲಿ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್, ಡಿಸಿಪಿ ಹರಿರಾಂ ಶಂಕರ್, ಕದ್ರಿ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಸವಿತೃತೇಜ ಹಾಗೂ ತಂಡ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.

ಈ ಸಂದರ್ಭ ಅನಗತ್ಯ ಸಂಚಾರ ನಡೆಸುತ್ತಿದ್ದ ವಾಹನಗಳನ್ನ ಸೀಜ್ ಮಾಡಿ ಪ್ರಕರಣ ದಾಖಲಿಸಿದ್ದಾರೆ.ಅಲ್ಲದೆ ಕೋವಿಡ್ ಸ್ಟಿಕ್ಕರ್ ಹಾಕಿ ಓಡಾಡುತ್ತಿರುವ ಎಲ್ಲಾ ವಾಹನಗಳಲ್ಲಿನ ಸ್ಟಿಕ್ಕರ್ಗಳನ್ನು ಪೊಲೀಸರು ಕಿತ್ತುಹಾಕಿದ್ದಾರೆ. ಸೀಜ್ ಆಗಿರುವ ವಾಹನಗಳನ್ನು ಅದರ ಮಾಲೀಕರು ಕೋರ್ಟ್ ಮೂಲಕವೇ ಬಿಡಿಸಿಕೊಳ್ಳಬೇಕಾಗುತ್ತದೆ.