LATEST NEWS
ಬೋಳಾರದಲ್ಲಿ ಮತ್ತೆ ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ವಿರೋಧ..ಸ್ಥಳೀಯರ ಮನವೊಲಿಸಿದ ಮಂಗಳೂರು ಸಹಾಯಕ ಆಯುಕ್ತ
ಮಂಗಳೂರು, ಜೂ. 28 :ಕೊರೊನಾ ಸೊಂಕಿನಿಂದ ಸಾವನಪ್ಪಿದವರ ಅಂತ್ಯಕ್ರಿಯೆ ದಕ್ಷಿಣಕನ್ನಡ ಜಿಲ್ಲಾಡಳಿತಕ್ಕೆ ತಲೆನೋವಾಗಿ ಸಂಭವಿಸಿದೆ. ಇಂದು ಮತ್ತೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಸುರತ್ಕಲ್‌ನ ಇಡ್ಯದ 31 ವರ್ಷದ ಯುವಕನ ಅಂತ್ಯಸಂಸ್ಕಾರಕ್ಕೆ ಬೋಳಾರದ ಮಸೀದಿಯ ಆವರಣದಲ್ಲಿರುವ ದಫನ ಭೂಮಿಯಲ್ಲಿ ನಡೆಸುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ. ನಂತರ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ರ ಮಧ್ಯಪ್ರವೇಶದಿಂದ ಬೋಳಾರದಲ್ಲೇ ದಫನ ಕಾರ್ಯವನ್ನು ಸಂಜೆಯ ಸುಮಾರಿಗೆ ನೆರವೇರಿಸಲಾಯಿತು.
ಇಡ್ಯಾ ಗ್ರಾಮದ 31 ವರ್ಷದ ಸೋಂಕಿತ ಮೃತಪಟ್ಟಿದ್ದು ಇಡ್ಯಾ ಮಸೀದಿ ಕಬರ್ ಗುಂಡಿಯಲ್ಲಿ ನೀರು ತುಂಬಿದ ಕಾರಣದಿಂದ ಬೋಳಾರ ಬಳಿಯ ಮಸೀದಿಯಲ್ಲಿ ಅಧಿಕಾರಿಗಳು ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸುರತ್ಕಲ್ ಇಡ್ಯಾ ಮಸೀದಿಯಲ್ಲೇ ದಫನ ಮಾಡುವಂತೆ ಒತ್ತಾಯ ಮಾಡಿದ್ದರು.
ಆ ಹಿನ್ನೆಲೆಯಲ್ಲಿ ಬೋಳಾರದ ಮಸೀದಿಯಲ್ಲಿ ದಫನ ಮಾಡುವ ಕಾರ್ಯ ವನ್ನು ಕೈ ಬಿಟ್ಟು ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಇಡ್ಯಾಕ್ಕೆ ಕೊಂಡೊಯ್ಯಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಮೃತದೇಹವನ್ನು ಮತ್ತೆ ಬೋಳಾರಕ್ಕೆ ತರುವಂತೆ ಸೂಚಿಸಿದರು. ಅಲ್ಲದೆ ತಕ್ಷಣ ಬೋಳಾರಕ್ಕೆ ಧಾವಿಸಿ ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸುವವರ ಜೊತೆ ಮಾತುಕತೆ ನಡೆಸಿ, ಮನವೊಲಿಸಿದರು. ಬೋಳಾರ ಪರಿಸರದ ಯಾರೇ ಕೊರೋನಕ್ಕೆ ಬಲಿಯಾದರೆ ಅವರ ಅಂತ್ಯಸಂಸ್ಕಾರಕ್ಕೆ ನಮ್ಮ ವಿರೋಧವಿಲ್ಲ. ಕೊರೋನಕ್ಕೆ ಬಲಿಯಾದ ಹೊರಗಿನ ವ್ಯಕ್ತಿಗಳನ್ನು ಇಲ್ಲಿ ಅಂತ್ಯಸಂಸ್ಕಾರ ನಡೆಸುವುದು ಸರಿಯಲ್ಲ. ಅದಕ್ಕೆ ನಮ್ಮ ಆಕ್ಷೇಪವಿದೆ ಎಂದು ಸ್ಥಳೀಯರು ತಿಳಿಸಿದ್ದರು.
ಮುಂದಿನ ಪ್ರಕರಣಗಳ ಬಗ್ಗೆ ಆಮೇಲೆ ನಿರ್ಧರಿಸೋಣ. ಇದೀಗ ಇಲ್ಲಿ ಎಲ್ಲಾ ಸಿದ್ಧತೆ ನಡೆಸಲಾಗಿದೆ. ಹಾಗಾಗಿ ವಿರೋಧ ವ್ಯಕ್ತಪಡಿಸದೆ ದಫನ ಕಾರ್ಯಕ್ಕೆ ಅವಕಾಶ ಮಾಡಿಕೊಡಿ ಎಂದು ಸಹಾಯಕ ಆಯುಕ್ತರು ಸೂಚಿಸಿದರು. ಅಂತಿಮವಾಗಿ ವಿರೋಧ ವ್ಯಕ್ತಪಡಿಸುವವರು ಸಹಮತ ವ್ಯಕ್ತಪಡಿಸಿದರು. ಆ ಬಳಿಕ ಸಂಜೆಯ ಸುಮಾರಿಗೆ ಬೋಳಾರದ ಮಸೀದಿಯ ಆವರಣದಲ್ಲೇ ದಫನ ಕಾರ್ಯ ನೆರವೇರಿಸಲಾಯಿತು.
ಇನ್ನು ಸ್ಥಳೀಯರು ಇದೇ ಕೊನೆಯ ಬಾರಿ ಅವಕಾಶ ನೀಡಲಾಗುವುದು. ಇನ್ನು ಮುಂದೆ ಸ್ಥಳೀಯರು ಹೊರತುಪಡಿಸಿ ಬೇರೆ ಪ್ರದೇಶದವರ ಅಂತ್ಯ ಸಂಸ್ಕಾರವನ್ನು ಇಲ್ಲಿ ಮಾಡುವಂತಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
https://youtu.be/lJtp68I0a5M