LATEST NEWS
ಅವ್ಯಾಹತವಾಗಿ ನಡೆಯುತ್ತಿರುವ ಲೈಟ್ ಫಿಶಿಂಗ್ ಕಣ್ಣ್ ಮುಚ್ಚಿ ಕುಳಿತ ಮೀನುಗಾರಿಕೆ ಇಲಾಖೆ
ಅವ್ಯಾಹತವಾಗಿ ನಡೆಯುತ್ತಿರುವ ಲೈಟ್ ಫಿಶಿಂಗ್ ಕಣ್ಣ್ ಮುಚ್ಚಿ ಕುಳಿತ ಮೀನುಗಾರಿಕೆ ಇಲಾಖೆ
ಮಂಗಳೂರು ಫೆಬ್ರವರಿ 28: ಬೆಳಕು ಮೀನುಗಾರಿಕೆ (ಲೈಟ್ ಫಿಶಿಂಗ್) ನಿರ್ಬಂಧಿಸಿದ ಸರ್ಕಾರ ಮತ್ತು ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಮಂಗಳೂರು ಭಾಗದಲ್ಲಿ ಮೀನುಗಾರಿಕೆ ಮುಂದುವರಿದಿದೆ. ಮಂಗಳೂರಿನಲ್ಲಿ ನಿಷೇಧಿತ ಲೈಟ್ ಫಿಶಿಂಗ್ ಮೀನುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಸರ್ಕಾರದ ಆದೇಶಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಕರಾವಳಿಯವರೇ ಆದ ಮೀನುಗಾರಿಕಾ ಸಚಿವರು ಕೂಡ ಈ ಅಕ್ರಮಕ್ಕೆ ಯಾವುದೇ ಕ್ರಮಕೈಗೊಳ್ಳದೇ ಇರುವುದು ಮೀನುಗಾರರಲ್ಲಿ ಅಚ್ಚರಿ ಮೂಡಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀರಿನ ಮೇಲೆ ಅಥವಾ ಒಳಗೆ ಯಾವುದೇ ಕೃತಕ ದೀಪ ಬಳಸಿ ಮಾಡುವ ಪರ್ಸೀನ್, ಗಿಲ್‌ನೆಟ್ ಮೀನುಗಾರಿಕೆ ನಿಷೇಧಿಸಿದೆ. ಅಲ್ಲದೆ ಸರ್ಕಾರದ ಆದೇಶ ಉಲ್ಲಂಘಿಸುವವರ ಡೀಸೆಲ್ ಸಹಾಯಧನ ತಡೆ, ಮೀನುಗಾರಿಕಾ ಲೈಸೆನ್ಸ್, ನೋಂದಣಿ ರದ್ದು ಮಾಡಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿತ್ತು.
ಆದರೆ ಸರ್ಕಾರದ ಆದೇಶ ಧಿಕ್ಕರಿಸಿ ಅನೇಕ ಮೀನುಗಾರಿಕಾ ಬೋಟುಗಳು ಲೈಟ್ ಫಿಶಿಂಗ್ ನಡೆಸುತ್ತಿವೆ. ಬೋಟುಗಳಲ್ಲಿ ಅಧಿಕ ಸಾಮರ್ಥ್ಯದ ಜನರೇಟರ್ ಅಳವಡಿಸಿ ದೊಡ್ಡ ದೊಡ್ಡ ಲೈಟ್ ಬಳಸಿ ಲೈಟ್ ಫಿಶಿಂಗ್ ಮೀನುಗಾರಿಕೆ ನಡೆಸುತ್ತಿದ್ದಾರೆ. ಕರಾವಳಿಯ ಆರ್ಥಿಕತೆಯ ಜೀವನಾಡಿ ಮೀನುಗಾರಿಕೆ. ಈಗಾಗಲೇ ಹವಮಾನ ವೈಫರಿತ್ಯ ಸೇರಿದಂತೆ ಚಂಡಮಾರುತಗಳ ಹಾವಳಿಯಿಂದ ಮತ್ಸೋದ್ಯಮ ಇತಿಹಾಸದಲ್ಲೇ ಕಂಡುಕೇಳರಿಯದ ಕುಸಿತ ಕಂಡಿದೆ.
ಮೀನಿನ ಬೇಟೆ ಸಿಗದೆ ಸಣ್ಣಪುಟ್ಟ ಮೀನುಗಾರರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ಲೈಟ್ ಫಿಶಿಂಗ್ ಮೂಲಕ ಮೀನುಗಾರಿಕೆಗೆಯನ್ನು ಸಂಪೂರ್ಣವಾಗಿ ಕೊನೆಗಾಣಿಸಲು ಕೆಲವು ಬೋಟ್ ಮಾಲಿಕರು ಹವಣಿಸುತ್ತಿರವುದು ಮೀನುಗಾರರಲ್ಲಿ ಆತಂಕ ಮೂಡಿಸಿದೆ.
ಜಿಲ್ಲೆಯಲ್ಲಿ ಅವ್ಯಾಹತವಾಗಿ ಲೈಟ್ ಫಿಶಿಂಗ್ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ. ಕೇರಳದ ಕಡಲಗಡಿಯಿಂದ ಗೋವಾದ ಕಡಲಗಡಿಯವರೆಗೆ ರಾಜ್ಯದ ಜಲಭಾಗವಿದ್ದು,ಸುಮಾರು500 ಕ್ಕಿಂತ ಅಧಿಕ ಬೋಟ್ ಗಳು ಈ ರೀತಿಯಾಗಿ ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದಾರೆ.
ಕಡಲುಗಳ್ಳರ ನಿರಂತರ ಮಾಫಿಯಾಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ RSS ಮುಖಂಡರೊಬ್ಬರ ಕೃಪಾಕಟಾಕ್ಷವಿರುವ ಆರೋಪವೂ ಕೇಳಿಬಂದಿದೆ. ಧರ್ಮದ ಹೆಸರಿನಲ್ಲಿ ಸರ್ಕಾರವೂ ಅಕ್ರಮಕ್ಕೆ ಸಾಥ್ ನೀಡಿದ್ದೂ,ಕೋಸ್ಟ್ ಗಾರ್ಡ್ ಹಾಗೂ ಮೀನುಗಾರಿಕೆ ಇಲಾಖೆ ಕೂಡಾ ಸೈಲೆಂಟ್ ಆಗಿದೆ. ನಿರಂತರವಾಗಿ ಈ ಬೇಟೆ ನಡೆಯುತ್ತಿರೋದ್ರಿಂದ ಕಡಲ ತೀರದ ನಾಡದೋಣಿ ಮೀನುಗಾರರು ಮಾತ್ರ ಮೀನು ಸಿಗದೆ ಕೆಲಸವಿಲ್ಲದೆ ನರಕ ಯಾತನೆ ಅನುಭವಿಸುತ್ತಿದ್ದಾರೆ.
ಕರಾವಳಿ ಮೂಲದವರೇ ಆದ ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯೂ ಅಕ್ರಮ ನಡೆಯುತ್ತಿದ್ದರೂ ಸುಮ್ಮನಿರೋದು ಮೀನುಗಾರರನ್ನೇ ಅಚ್ಚರಿಗೊಳಿಸಿದೆ. ಮೀನುಗಾರಿಕೆ ಇಲಾಖೆಯೂ ಅಕ್ರಮಗಳಿಗೆ ಸಾಕ್ಷಿ ಇಲ್ಲ ಎಂಬ ಉದ್ಧಟತನದ ಹೇಳಿಕೆಯನ್ನು ನೀಡುತ್ತಿದ್ದಾರೆ.