KARNATAKA
ಮುಸ್ಲಿಂ ಮೀಸಲಾತಿ ಮರಳಿ ತರಲು ಬಿಡೆವು: ಅಮಿತ್ ಶಾ

ಧಾರವಾಡ, ಎಪ್ರಿಲ್ 29: ‘ಸಂವಿಧಾನದಲ್ಲಿ ಇರದ ಧರ್ಮಾಧಾರಿತ ಮೀಸಲಾತಿ ರಾಜ್ಯದಲ್ಲಿತ್ತು. ಅದನ್ನು ಬಿಜೆಪಿ ಸರ್ಕಾರ ತೆಗೆದುಹಾಕಿದೆ. ಮುಂದೆಂದೂ ಅದು ಮರಳಿ ಜಾರಿಯಾಗಲು ಬಿಡುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಅಣ್ಣಿಗೇರಿಯಲ್ಲಿ ಶುಕ್ರವಾರ ನಡೆದ ನವಲಗುಂದ ಹಾಗೂ ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾದ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಅನಿಲ್ ಮೆಣಸಿನಕಾಯಿ ಪರವಾಗಿ ಪ್ರಚಾರ ಮಾಡಿ ಅವರು ಮಾತನಾಡಿದರು. ‘ಕಾಂಗ್ರೆಸ್ ಜಾರಿಗೆ ತಂದಿದ್ದ ಈ ಧರ್ಮಾಧಾರಿತ ಮೀಸಲಾತಿಯನ್ನು ಬಿಜೆಪಿ ಸರ್ಕಾರ ತೆಗೆದುಹಾಕಿ, ಅದನ್ನು ಒಕ್ಕಲಿಗ, ಲಿಂಗಾಯತ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಹಂಚಲಾಗಿದೆ. ಕಾಂಗ್ರೆಸ್ ಸರ್ಕಾರ ಬಂದರೆ ಈ ಮೀಸಲಾತಿಯನ್ನು ಮರಳಿ ತರುವುದಾಗಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ. ಯಾರ ಮೀಸಲಾತಿಯನ್ನು ಕಸಿದುಕೊಳ್ಳಲಿದ್ದಾರೆ ಎಂಬುದನ್ನು ಅವರೇ ಸ್ಪಷ್ಟಪಡಿಸಲಿ’ ಎಂದು ಸವಾಲು ಹಾಕಿದರು.

‘ನನ್ನ ವಿರುದ್ಧ ಕಾಂಗ್ರೆಸ್‌ನವರು ಪೊಲೀಸರಿಗೆ ದೂರು ನೀಡಿದ್ದಾರೆ. ಪಿಎಫ್‌ಐನಂತ ದೇಶದ್ರೋಹಿ ಸಂಘಟನೆ ವಿರುದ್ಧ ಬಿಜೆಪಿ ಸರ್ಕಾರ ಕೈಗೊಂಡ ಕ್ರಮದಿಂದಾಗಿ ಕರ್ನಾಟಕವನ್ನು ನಾವು ರಕ್ಷಿಸಿದ್ದೇವೆ. ಪ್ರವೀಣ ನೆಟ್ಟಾರು ಹತ್ಯೆ, ದೇಶ ವಿಭಜಿಸುವ ಕೆಲಸ ಮಾಡುತ್ತಿದ್ದ ಇಂಥ ಸಂಘಟನೆಯನ್ನು ಕಾಂಗ್ರೆಸ್ ತನ್ನ ತಲೆ ಮೇಲೆ ಹೊತ್ತು ಮರೆಯುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಸಂಘಟನೆಯ ಒಬ್ಬೊಬ್ಬರನ್ನೂ ಹುಡುಕಿ, ಕಂಬಿಯ ಹಿಂದೆ ಕಳುಹಿಸುವ ಕೆಲಸ ಮಾಡಿದೆ. ಕಾಂಗ್ರೆಸ್ ನಾಯಕರ ದೂರಿಗೆ ನಾನು ಹೆದರಬೇಕಿಲ್ಲ’ ಎಂದರು.
‘ಒಂದು ಕಾಲದಲ್ಲಿ ಕೇಂದ್ರ, ರಾಜ್ಯ ಹಾಗೂ ಪಕ್ಕದ ಗೋವಾದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಆಗ ಮಹದಾಯಿ ನದಿಯ ವಿವಾದ ಇತ್ಯರ್ಥಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ನರೇಂದ್ರ ಮೋದಿ ಸರ್ಕಾರವು ಅದನ್ನು ಸಾಧ್ಯವಾಗಿಸಿತು. ಜತೆಗೆ ಕಳಸಾ ಬಂಡೂರಿ ನಾಲಾ ಯೋಜನೆಗೂ ಅಸ್ತು ಎಂದಿದೆ. ಇದರೊಂದಿಗೆ ಭದ್ರಾ ಮತ್ತು ಕೃಷ್ಣ ಮೇಲ್ದಂಡೆ ಯೋಜನೆಗಳಿಗೂ ನೂರಾರು ಕೋಟಿ ರೂಪಾಯಿ ಹಣ ನೀಡಿದೆ. ಇದು ಸಾಧ್ಯವಾಗಿದ್ದು ಡಬ್ಬಲ್ ಎಂಜಿನ್ ಸರ್ಕಾರದಿಂದ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಿವರ್ಸ್ ಗೇರ್ ಮೂಲಕ ರಾಜ್ಯ ಹಿಮ್ಮುಖವಾಗಿ ಚಲಿಸಲಿದೆ’ ಎಂದು ಶಾ ಎಚ್ಚರಿಸಿದರು.