LATEST NEWS
ಕೇರಳದ ನರ್ಸ್ ಗಳಿಂದ ಕುವೈತ್ ಗಲ್ಫ್ ಬ್ಯಾಂಕ್ ಗೆ 700 ಕೋಟಿಗೂ ಅಧಿಕ ಪಂಗನಾಮ
ಕೇರಳ ಡಿಸೆಂಬರ್ 09: ಕುವೈತ್ ನ ಗಲ್ಫ್ ಬ್ಯಾಂಕ್ ಗೆ ಭಾರತೀಯ ಪ್ರಜೆಗಳು ಅದರಲ್ಲಿ ಹೆಚ್ಚಾಗಿ ಕೇರಳದ ನರ್ಸ್ ಗಳು ಸುಮಾರು 700 ಕೋಟಿಗೂ ಅಧಿಕ ವಂಚನೆ ಮಾಡಿದ ಘಟನೆ ನಡೆದಿದ್ದು, ಇದೀಗ ಕುವೈತ್ ಬ್ಯಾಂಕ್‌ನಿಂದ ದೂರಿನ ನಂತರ ಕೇರಳದಲ್ಲಿ ಕನಿಷ್ಠ 10 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಕುವೈತ್ ನ ಗಲ್ಫ್ ಬ್ಯಾಂಕ್ ಗಳಲ್ಲಿ ಇವರು ಸಾಲ ತೆಗೆದುಕೊಂಡು ನಂತರ ದೇಶ ಬಿಟ್ಟು ತೆರಳಿದ್ದಾರೆ. ಅನೇಕರು ಕೆನಡಾದಂತಹ ದೇಶಗಳಿಗೆ ಮತ್ತು ಯುರೋಪಿನ ಹಲವಾರು ದೇಶಗಳಿಗೆ ವಲಸೆ ಹೋಗಿದ್ದಾರೆ. ಆರಂಭದಲ್ಲಿ, ಅವರು ಸಣ್ಣ ಮೊತ್ತದ ಸಾಲಗಳನ್ನು ಪಡೆದರು ಮತ್ತು ನಂತರ ದೊಡ್ಡ ಮೊತ್ತದ ಸಾಲಗಳನ್ನು ಪಡೆದಿದ್ದಾರೆ. ಬ್ಯಾಂಕ್ ಪ್ರಕಾರ, 10 ಪ್ರಕರಣಗಳಲ್ಲಿ ವಂಚಿಸಿದ ಮೊತ್ತವು 10.21 ಕೋಟಿ ರೂ. ಕುವೈತ್ ಗಲ್ಫ್ ಬ್ಯಾಂಕ್ ಸುಮಾರು 1,425 ಭಾರತೀಯ ಪ್ರಜೆಗಳಿಂದ ಸುಮಾರು 700 ಕೋಟಿ ರೂಪಾಯಿಗಳ ನಷ್ಟ ಆಗಿದೆ ಎಂದು ಹೇಳಿದೆ. ಅದರಲ್ಲಿ ಹೆಚ್ಚಿನವರು ಕೇರಳದಿಂದ ಆಗಮಿಸಿದವರಾಗಿದ್ದಾರೆ.
ಸಾಲ ಮರುಪಾವತಿಯಾಗದಿರುವ ಬಗ್ಗೆ ಬ್ಯಾಂಕ್ ತನಿಖೆ ಆರಂಭಿಸಿದಾಗ, ಹಲವಾರು ಮಲಯಾಳಿ ನರ್ಸ್‌ಗಳು ಬ್ಯಾಂಕ್‌ಗೆ ವಂಚಿಸಿದ್ದಾರೆ ಎಂದು ತಿಳಿದುಬಂದಿದೆ. ನಂತರ ಬ್ಯಾಂಕ್‌ನ ಅಧಿಕಾರಿಗಳು ಕೇರಳಕ್ಕೆ ಭೇಟಿ ನೀಡಿ ದೂರು ದಾಖಲಿಸಿದ್ದರು. ಕೇರಳ ಪೊಲೀಸರು ಪ್ರಸ್ತುತ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಪ್ರತಿ ಪ್ರಕರಣವನ್ನು ವೈಯಕ್ತಿಕ ಆಧಾರದ ಮೇಲೆ ನಿರ್ವಹಿಸುತ್ತಿದ್ದಾರೆ. ಭಾಗಿಯಾಗಿರುವವರೆಲ್ಲರೂ ಇನ್ನೂ ಭಾರತೀಯ ಪ್ರಜೆಗಳೇ ಎಂಬುದನ್ನು ಪರಿಶೀಲಿಸಬೇಕು ಮತ್ತು ಅವರು ಪ್ರಸ್ತುತ ಇರುವ ಸ್ಥಳವನ್ನು ಪತ್ತೆಹಚ್ಚಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಗಳ ಪೈಕಿ, ಕುವೈತ್‌ನ ಆರೋಗ್ಯ ಸಚಿವಾಲಯದಲ್ಲಿ ಕನಿಷ್ಠ 800 ವ್ಯಕ್ತಿಗಳು ನರ್ಸ್‌ಗಳಾಗಿ ಕೆಲಸ ಮಾಡಿದ್ದಾರೆ ಎಂದು ವರದಿಯಾಗಿದೆ.