LATEST NEWS
ಸುಪ್ರೀಂಕೋರ್ಟ್ ಕ್ಷಮೆ ಕೇಳಲು ನಿರಾಕರಿಸಿದ ಹಾಸ್ಯ ಕಲಾವಿದ ಕುನಾಲ್ ಕಮ್ರಾ…ಕುನಾಲ್ ಕಮ್ರಾ ಅಫಿಡವಿಟ್ ಗೆ ಶಾಕ್ ಆದ ಕಾನೂನು ಪಂಡಿತರು…!!
ನವದೆಹಲಿ ಜನವರಿ 29: ಸುಪ್ರೀಂಕೋರ್ಟ್ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿ ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದ ಹಾಸ್ಯ ಕಲಾವಿದ ಕುನಾಲ್ ಕಮ್ರಾ, ತಮ್ಮ ಟ್ವೀಟ್‌ಗೆ ಸುಪ್ರೀಂಕೋರ್ಟ್ ಕ್ಷಮೆ ಕೇಳಲು ನಿರಾಕರಿಸಿದ್ದು, ಹಾಸ್ಯಕ್ಕೆ ಯಾವುದೇ ರಕ್ಷಣೆಯ ಅಗತ್ಯವಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಹಲವು ಪ್ರಕರಣಗಳ ತೀರ್ಪಿಗೆ ಸಂಬಂಧಿಸಿದಂತೆ ಸ್ಟಾಂಡಪ್ ಕಾಮಿಡಿಯನ್ ಕುನಾಲ್ ಕಮ್ರಾ ಹಾಸ್ಯಾತ್ಮಕವಾಗಿಯೇ ಬಹಿರಂಗ ಟೀಕೆ ಮಾಡಿದ್ದರು. ಹೀಗಾಗಿ ಕುನಾಲ್ ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲಾಗಿತ್ತು. ಅಲ್ಲದೆ, ಅವರು ವಿರುದ್ಧ ನ್ಯಾಯಾಂಗ ನಿಂದನೆ ನೊಟೀಸ್ ಸಹ ಜಾರಿ ಮಾಡಲಾಗಿತ್ತು. ಆದರೆ, ಈ ನೊಟೀಸ್ಗೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ ಅಫಿಡವಿಟ್ ಸಲ್ಲಿಸಿರುವ ಕುನಾಲ್ ಕಮ್ರಾ, ಹಾಸ್ಯಕ್ಕೆ ಯಾವುದೇ ರಕ್ಷಣೆ ಅಗತ್ಯವಿಲ್ಲ. ಹಾಸ್ಯಗಳು ವಾಸ್ತವವಲ್ಲ ಅಥವಾ ವಾಸ್ತವ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಇವೆಲ್ಲವೂ ಹಾಸ್ಯನಟನ ಗ್ರಹಿಕೆಗೆ ಆಧಾರವಾಗಿದೆ. ಹೀಗಾಗಿ ನಾನು ಕ್ಷಮೆಯಾಚಿಸಲಾರೆ” ಎಂದು ತಿಳಿಸಿದ್ದಾರೆ.
ಘನ ನ್ಯಾಯಾಲಯದ ಕುರಿತು ಜನರ ನಂಬಿಕೆಯನ್ನು ಹಾಳು ಮಾಡುವ ಉದ್ದೇಶದಿಂದ ನಾನು ಆ ರೀತಿಯ ಟ್ವೀಟ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿರುವ ಕುನಾಲ್ ಕಮ್ರಾ, ಸುಪ್ರೀಂಕೋರ್ಟ್‌ಗೆ ಕ್ಷಮೆ ಕೋರುವ ಅಗತ್ಯ ಕಂಡು ಬರುತ್ತಿಲ್ಲ ಎಂದು ಹೇಳಿದ್ದಾರೆ.
ನ್ಯಾಯಾಂಗದ ಮೇಲೆ ಸಾರ್ವಜನಿಕರ ನಂಬಿಕೆಯು ಅದರ ಕಾರ್ಯಗಳನ್ನು ಅವಲಂಬಿಸಿದೆ. ಅದರ ಬಗ್ಗೆ ಮಾಡಿರುವ ಟೀಕೆಗಳ ಮೇಲೆ ಅಲ್ಲ. ತನ್ನ ಟ್ವೀಟ್‌ಗಳು ಹಾಗೂ ಹಾಸ್ಯಗಳು ವಿಶ್ವದ ಅತ್ಯಂತ ಶಕ್ತಿಶಾಲಿ ನ್ಯಾಯಾಲಯದ ಅಡಿಪಾಯವನ್ನು ಅಲುಗಾಡಿಸಬಹುದು ಎಂದು ಹೇಳುವ ಮೂಲಕ ತನ್ನ ಸಾಮರ್ಥ್ಯಗಳನ್ನು ತಪ್ಪಾಗಿ ಅರ್ಥೈಸಲಾಗಿದೆ” ಎಂದು ಕುನಾಲ್ ಕಮ್ರಾ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಯಾವುದಾದರೂ ಸಂಸ್ಥೆಯ ಮೇಲೆ ಟೀಕೆ ಮಾಡಬಾರದು ಎಂದು ನಂಬುವುದು ಹೇಗಿದೆ ಎಂದರೆ, ಅತ್ಯಂತ ಕೆಟ್ಟ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಅವರ ಮನೆಗೆ ಹೋಗಲು ತಾವೆ ದಾರಿ ಹುಡುಕಬೇಕು ಎಂಬಂತಿದೆ; ಇದು ಅಸಂಬದ್ದ ಮತ್ತು ಪ್ರಜಾಪ್ರಭುತ್ವ ವಿರೋಧಿ” ಎಂದು ಅವರು ಹೇಳಿದ್ದಾರೆ.