LATEST NEWS
ಕೂಳೂರು ಸೇತುವೆ ರಿಪೇರಿ – ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ – ವಿಡಿಯೋ ವೈರಲ್
ಮಂಗಳೂರು ಅಗಸ್ಟ್ 22: ಕೂಳೂರು ಸೇತವೆ ಬಳಿ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆದ ಘಟನೆ ನಿನ್ನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗುವ ನಗರದ ಹೊರವಲಯದ ಕೂಳೂರು ಸೇತುವೆಯಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಇನ್ನೊಂದು ಸೇತುವೆಯ ಏಕಪಥದಲ್ಲಿ ಮಾತ್ರ ಸಂಚಾರಕ್ಕೆ ಅವಕಾಶಮಾಡಿಕೊಟ್ಟ ಕಾರಣ ಬುಧವಾರ ಅಪರಾಹ್ನದಿಂದ ರಾತ್ರಿ ವರೆಗೆ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಪಣಂಬೂರಿನಿಂದ ಮಂಗಳೂರಿಗೆ ಆಗಮಿಸುವ ಭಾಗದಲ್ಲಿ ಕೂಳೂರು ಸೇತುವೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ದುರಸ್ತಿಗಾಗಿ ವಾಹನ ಸಂಚಾರ ನಿಷೇಧಿಸಿದ್ದರು. ಮಂಗಳೂರಿನಿಂದ ನಿರ್ಗಮಿಸುವ ಇನ್ನೊಂದು ಭಾಗದಲ್ಲಿ ಮಾತ್ರ ಘನ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರು. ಇದು ಸೋಮವಾರದಿಂದಲೇ ಜಾರಿಗೆ ಬಂದಿದ್ದು, ಸಂಜೆ ವೇಳೆಗೆ ಮಾತ್ರ ವಾಹನ ದಟ್ಟಣೆ ಉಂಟಾಗುತ್ತಿತ್ತು.
ವಾಹನ ಸಂಚಾರ ನಿಷೇಧಕ್ಕೆ ಒಳಗಾದ ಕೂಳೂರು ಸೇತುವೆಗೆ ಬುಧವಾರ ಡಾಂಬರೀಕರಣ ಆರಂಭಿಸಲಾಗಿದೆ. ಇದೇ ವೇಳೆ ಇನ್ನೊಂದುಸೇತುವೆಯಲ್ಲಿ ವಾಹನಗಳ ಆಗಮನ ಮತ್ತು ನಿರ್ಗಮನ ಒಂದು ಭಾಗದಲ್ಲಿ ಮಾತ್ರ ನಡೆಯುತ್ತಿತ್ತು. ಆದರೆ ಬುಧವಾರ ಅಪರಾಹ್ನ ಟ್ಯಾಂಕರ್, ಟ್ರಕ್‌ಗಳು ಸಂಚರಿಸಿದ ಕೂಳೂರು ಜಂಕ್ಷನ್‌ನಲ್ಲಿ ಕೇವಲ ಮೂರು ಮಂದಿ ಸಂಚಾರಿ ಪೊಲೀಸರು ಇದ್ದ ಕಾರಣ ಟ್ರಾಫಿಕ್ ನಿಯಂತ್ರಣಕ್ಕೆ ಹೆಣಗಾಡಬೇಕಾಯಿತು. ಸಂಜೆಯಿಂದ ಟ್ರಾಫಿಕ್ ಸಮಸ್ಯೆ ಉಲ್ಬಣಿಸಿದ್ದು, ನಂತೂರು, ಕುಂಟಿಕಾನ, ಮಾಲೇಮಾರ್, ಕೊಟ್ಟಾರಚೌಕಿ ಮತ್ತಿತರ ಕಡೆಗಳಲ್ಲಿ ಸಂಪೂರ್ಣ ಬ್ಲಾಕ್ ಆಗಿದ್ದು, ವಾಹನ ಸಂಚಾರ ಗಂಟೆಗಟ್ಟಲೆ ಸ್ತಬ್ದಗೊಂಡಿತ್ತು. ಎ.ಜೆ. ಆಸತ್ರೆಯಿಂದ ನಿರ್ಗಮಿಸಬೇಕಾದ ಆಂಬುಲೆನ್ಸ್ ಹೊರಬರಲಾಗದೆ ಪ್ರವೇಶ ದ್ವಾರದಲ್ಲೇ ಸಿಲುಕಿಕೊಂಡಿತ್ತು. ದೂರದ ಊರುಗಳಿಂದ ಸ್ವಂತ ವಾಹನಗಳಲ್ಲಿ, ಬಸ್‌ಗಳಲ್ಲಿ ಆಗಮಿಸಿದ ಪ್ರಯಾಣಿಕರು ಅರ್ಧದಲ್ಲೇ ಸಿಲುಕಿ ತೊಂದರೆ ಅನುಭವಿಸಬೇಕಾಯಿತು. ಕೂಳೂರು ಮೇಲೇತುವೆ ಪೂರ್ತಿ ಕುಂಟಿಕಾನ ವರೆಗೆ ಬ್ಲಾಕ್ ಆಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನಗರ ಪೊಲೀಸ್ ಕಮಿಷನರ್, ಟ್ರಾಫಿಕ್ ಎಸಿಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳಿಗೆ ಸಂಚಾರ ಸಮಸ್ಯೆ ಸರಿಪಡಿಸುವಂತೆ ಬಿಡುವಿಲ್ಲದ ಸಂದೇಶ, ಕರೆಗಳು ಬಂದಿವೆ. ಸಂಚಾರಿ ಪೊಲೀಸರು ಟ್ರಾಫಿಕ್ ನಿಯಂತ್ರಣಕ್ಕೆ ಹರಸಾಹಸಪಟ್ಟಿದ್ದು ರಾತ್ರಿ ವೇಳೆಗೆ ಟ್ರಾಫಿಕ್ ದಟ್ಟಣೆ ನಿಧಾನವಾಗಿ ಇಳಿಯತೊಡಗಿತ್ತು.