DAKSHINA KANNADA
ಪ್ರವಾಹ ಸಂತ್ರಸ್ತರಿಗೆ ನೆರವಿಗೆ ಧಾವಿಸಿದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ
ಪ್ರವಾಹ ಸಂತ್ರಸ್ತರಿಗೆ ನೆರವಿಗೆ ಧಾವಿಸಿದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ
ಪುತ್ತೂರು ಅಗಸ್ಟ್ 14: ರಾಜ್ಯದ ಪ್ರವಾಹ ಸಂತ್ರಸ್ತರ ನೆರವಿಗೆ ರಾಜ್ಯದ ಶ್ರೀಮಂತ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ ನೆರವಿಗೆ ಬಂದಿದೆ. ಪ್ರವಾಹ ಸಂತ್ರಸ್ಥರಿಗೆ ನೆರವಾಗಲು ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ನೀಡಲು ಕ್ಷೇತ್ರ ಮುಂದಾಗಿದೆ.
ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದ ಹಲವು ಜಿಲ್ಲೆಗಳು ಪ್ರವಾಹಪೀಡಿತವಾಗಿದ್ದು, ರಾಜ್ಯ ಸರಕಾರ ನೆರೆ ಸಂತ್ರಸ್ಥರಿಗೆ ಸಹಾಯವಾಗಲು ಸಾರ್ವಜನಿಕರಲ್ಲಿ ಮನವಿ ಮಾಡಿದೆ.ರಾಜ್ಯದ ಹಲವು ಸಂಘ ಸಂಸ್ಥೆಗಳು ನೆರೆ ಸಂತ್ರಸ್ತರಿಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ.
ಈ ನಡುವೆ ರಾಜ್ಯದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಕೂಡ ನೆರೆ ಸಂತ್ರಸ್ಥರಿಗೆ ನೆರವಾಗಲು ಮುಂದೆ ಬಂದಿದ್ದು, ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ನೀಡಲು ವ್ಯವಸ್ಥಾಪನಾ ಮಂಡಳಿಯಿಂದ ನಿರ್ಣಯ ಅಂಗೀಕರಿಸಿದ್ದಾರೆ. ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಕಳುಹಿಸಿಕೊಟ್ಟಿದೆ.
ಅಲ್ಲದೆ ದೇವಸ್ಥಾನದಲ್ಲಿರುವ ಪಂಜೆ, ಸೀರೆಗಳನ್ನು ಬೆಳ್ತಂಗಡಿ, ಬಂಟ್ವಾಳ ಹಾಗೂ ಮಡಿಕೇರಿಯ ಸಂತ್ರಸ್ತರಿಗೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಬಯಲು ಸೀಮೆಯ ಭಕ್ತರೇ ಹೆಚ್ಚಾಗಿ ಕುಕ್ಕೆ ದೇವಸ್ಥಾನಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ ಪ್ರವಾಹದಿಂದಾಗಿ ಸಂಕಷ್ಟದಲ್ಲಿರುವ ಬಯಲು ಸೀಮೆಯ ಭಕ್ತರ ನೆರವಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮುಂದಾಗಿದೆ.