LATEST NEWS
ಮಂಗಳೂರು – ಕುಡ್ಲದ ಪಿಲಿ ಪರ್ಬ-2023 ಉದ್ಘಾಟನೆ

ಮಂಗಳೂರು ಅಕ್ಟೋಬರ್ 21: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ, ನಡೆಯುತ್ತಿರುವ ದ್ವಿತೀಯ ವರ್ಷದ “ಕುಡ್ಲದ ಪಿಲಿ ಪರ್ಬ-2023” ಸ್ಪರ್ಧಾಕೂಟವನ್ನು ಇಂದು ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳನ್ವಯ ಗಣಹೋಮದ ನಂತರ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕುಡ್ಲ ಪಿಲಿಪರ್ಬದ ರೂವಾರಿ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಅವರ ತಂಡದ ಕಾರ್ಯವನ್ನು ಶ್ಲಾಘಿಸಿ ಅಭಿನಂದಿಸಿದರು. ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಮಾತನಾಡಿ, ಪಿಲಿಪರ್ಬವು ತುಳುನಾಡಿನ ಗತವೈಭವದ ಘನಪರಂಪರೆಯನ್ನು ಮೆಲುಕು ಹಾಕುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನ ಪ್ರಯತ್ನವಾಗಿದೆ. ಜಿಲ್ಲೆಯ ಅನುಭವಿ ಹಾಗೂ ನುರಿತ ಆರು ಜನ ತೀರ್ಪುಗಾರರ ಸಮ್ಮುಖದಲ್ಲಿ ನಡೆಯಲಿರುವ ಇಂದಿನ ಈ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಎಲ್ಲಾ 15 ಹುಲಿವೇಷ ತಂಡಗಳಿಗೂ ಶುಭ ಹಾರೈಕೆಗಳು ಮತ್ತು ಹುಲಿವೇಷ ತಂಡಗಳನ್ನು ಪ್ರೋತ್ಸಾಹಿಸಲು ಆಗಮಿಸಿದ ಎಲ್ಲರಿಗೂ ಹಾರ್ದಿಕ ಸ್ವಾಗತ ಎಂದರು.

ಉದ್ಘಾಟನೆಯ ನಂತರ ಪಿಲಿಪರ್ಬ-2023 ಸ್ಪರ್ಧಾಕೂಟದ ಮೊದಲ ತಂಡವಾಗಿ ಶಿವಶಕ್ತಿ ಟೈಗರ್ಸ್ ಕುಂಜತ್ತೂರು, ಮಂಜೇಶ್ವರ ಪ್ರದರ್ಶನ ನೀಡಿತು. ಈ ಸಂದರ್ಭದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪ ಮೇಯರ್ ಸುನಿತಾ ಪೂಜಾರಿ, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಗಿರಿಧರ್ ಶೆಟ್ಟಿ, ಅಧ್ಯಕ್ಷರಾದ ದಿವಾಕರ್ ಪಾಂಡೇಶ್ವರ, ಉದಯ ಪೂಜಾರಿ, ಮಾಜಿ ಶಾಸಕ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಹರಿಕೃಷ್ಣ ಬಂಟ್ವಾಳ, ಕಮಲಾಕ್ಷ ಬಜಿಲಕೇರಿ, ನರೇಶ್ ಶೆಣೈ, ಮತ್ತು ಬಿಜೆಪಿಯ ಮಹಾನಗರ ಪಾಲಿಕೆ ಸದಸ್ಯರುಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು