LATEST NEWS
ಗರ್ಭಗುಡಿಗೆ ಬಂದು ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ
ಉಡುಪಿ ಜುಲೈ04 : ಕಮಲಶಿಲೆ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕುಬ್ಜಾನದಿ ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸಿ ದೇವಿಯ ಪಾದ ಸ್ಪರ್ಶಿಸಿದೆ.
ವರ್ಷಕ್ಕೊಮ್ಮೆ ನಡೆಯುವ ನೈಸರ್ಗಿಕ ಅಚ್ಚರಿ ಇಂದು (ಜುಲೈ 4) ನಸುಕಿನ ನಾಲ್ಕು ಗಂಟೆಯ ಸುಮಾರಿಗೆ ನದಿ ನೀರು ಗರ್ಭಗುಡಿ ಪ್ರವೇಶಿಸುತ್ತಿದ್ದಂತೆಯೇ, ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಸಾಮಾನ್ಯವಾಗಿ, ಮಳೆಗಾಲದ ಸಮಯದ ಒಂದು ದಿನ, ನದಿ ನೀರು ಗರ್ಭಗುಡಿ ಪ್ರವೇಶಿಸಿ ದೇವರ ಚರಣ ಸ್ಪರ್ಷ ಮಾಡುವುದು ತಪ್ಪದೇ ನಡೆಯುತ್ತಿದೆ.
ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ವರ್ಷಕ್ಕೊಮ್ಮೆ ದೇವಾಲಯದ ಪಕ್ಕದಲ್ಲೇ ಇರುವ ಕುಬ್ಜಾ ನದಿಯ ನೀರು ಗರ್ಭಗುಡಿಗೆ ಉಕ್ಕಿ ಬರುತ್ತದೆ. ಆಷಾಢ ಅಥವಾ ಶ್ರಾವಣ ಮಾಸದ ಮಳೆಯಲ್ಲಿ ದುರ್ಗಾಪರಮೇಶ್ವರಿಗೆ ನೈಸರ್ಗಿಕ ಪುಣ್ಯಸ್ನಾನ ಆಗುವುದು ಹಿಂದಿನಿಂದಲೂ ಸಂಭವಿಸುತ್ತಿರುವ ನೈಸರ್ಗಿಕ ಅಚ್ಚರಿ. ಸಾಮಾನ್ಯವಾಗಿ, ಆರಿದ್ರಾ ಮಳೆಯ ವೇಳೆ ಕುಬ್ಜಾ ನದಿನೀರು ದೇವಾಲಯದ ಗರ್ಭಗುಡಿಯೊಳಗೆ ಪ್ರವೇಶಿಸಿ, ತಾಯಿಯ ಚರಣ ಸ್ಪರ್ಷ ಮಾಡಿ ಮತ್ತೆ ಇಳಿಮುಖವಾಗುತ್ತದೆ. ಭಕ್ತರು ಈ ವೇಳೆ, ದೇವಾಲಯದೊಳಗೆ ಪ್ರವೇಶಿಸಿದ ನದಿ ನೀರಿನಲ್ಲಿ ಪುಣ್ಯಸ್ನಾನ ಮಾಡುವುದು ವಾಡಿಕೆ.
ಉಡುಪಿ ಜಿಲ್ಲೆಯ ಕುಂದಾಪುರದಿಂದ ಕೇವಲ 35 ಕಿ.ಮೀ ದೂರದಲ್ಲಿರುವ ಈ ದೇವಾಲಯದ ಪಕ್ಕದಲ್ಲೇ ಕುಬ್ಜಾ ನದಿ ಹರಿಯುತ್ತದೆ. ಸಾಮಾನ್ಯವಾಗಿ ಶಿವನನ್ನು ಲಿಂಗ ರೂಪದಲ್ಲಿ ಪೂಜಿಸಿದರೆ ಇಲ್ಲಿ ಶ್ರೀ ಬ್ರಾಹ್ಮಿ ದುರ್ಗಾ ದೇವಿಯನ್ನು ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ.