LATEST NEWS
ಪಿಎಫ್‌ಐ ನಿಂದ 5.06 ಕೋಟಿ ಪರಿಹಾರ ಕೇಳಿದ KSRTC
ತಿರುವನಂತಪುರಂ, ಸೆಪ್ಟೆಂಬರ್ 28: ರಾಷ್ಟ್ರೀಯ ತನಿಖಾ ದಳ ದಾಳಿ ವಿರೋಧಿಸಿ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಭಾರೀ ನಷ್ಟವಾಗಿದ್ದು ಕೇರಳ ಸಾರಿಗೆ ಸಂಸ್ಥೆಯು ಪಿಎಫ್‌ಐನಿಂದ 5.06 ಕೋಟಿ ಪರಿಹಾರ ಕೇಳಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಕಳೆದ ಸೆಪ್ಟೆಂಬರ್ 23ರಂದು ಎನ್‌ಐಎ 15 ರಾಜ್ಯಗಳಲ್ಲಿ 93 ಕಡೆ ನಡೆಸಿದ ದಾಳಿಯಲ್ಲಿ ನೂರಾರು ಪಿಎಫ್‌ಐ ಕಾರ್ಯಕರ್ತರನ್ನು ವಶಕ್ಕೆ ಪಡೆದು, ಹಲವರನ್ನು ಬಂಧಿಸುವ ಕೆಲಸ ಮಾಡಿತ್ತು. ಇದನ್ನು ಖಂಡಿಸಿದ ಪಿಎಫ್‌ಐ ಕಾರ್ಯಕರ್ತರು ಹಿಂಸಾತ್ಮಕ ಪ್ರತಿಭಟನೆಗೆ ಮುಂದಾಗಿ ತಿರುವನಂತಪುರಂ, ಕೊಲ್ಲಂ, ಕೋಝಿಕ್ಕೋಡ್, ವಯನಾಡ್ ಮತ್ತು ಅಲಪ್ಪುಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ ಸಾಕಷ್ಟು ಬಸ್‌ಗಳನ್ನ ಜಖಂಗೊಳಿಸಿದ್ದರು.
Kochi, Kerala | A KSRTC bus was vandalised allegedly by people supporting the one-day bandh called by PFI today, in Companypadi near Aluva pic.twitter.com/XZqhiAxTDL
— ANI (@ANI) September 23, 2022
ಪಿಎಫ್‌ಐ ಕಾರ್ಯಕರ್ತರು ನಡೆಸಿದ 12 ಗಂಟೆಗಳ ಪ್ರತಿಭಟನೆಯಲ್ಲಿ 70ಕ್ಕೂ ಹೆಚ್ಚು ಬಸ್ಸುಗಳು ಹಾನಿಯಾಗಿವೆ. ಅಲ್ಲದೇ ಬಸ್ ಚಾಲಕರು, ಪ್ರಯಾಣಿಕರೂ ಗಾಯಗೊಂಡಿದ್ದಾರೆ ಸಾರಿಗೆ ಸಚಿವ ಎ. ರಾಜು ಹೇಳಿದ್ದಾರೆ.ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು, ಟ್ರಕ್‌ಗಳು ಮತ್ತು ಖಾಸಗಿ ವಾಹನಗಳ ಮೇಲೆ ಮುಂಜಾನೆ ಕಲ್ಲು ತೂರಾಟ ನಡೆದಿತ್ತು. ಕಲ್ಲು ತೂರಾಟದಿಂದ ಹಲವು ಬಸ್ ಚಾಲಕರು ಗಾಯಗೊಂಡಿದ್ದರು. ಕಣ್ಣೂರಿನಲ್ಲಿ ದ್ವಿಚಕ್ರ ವಾಹನದ ಮೇಲೆ ಕಚ್ಚಾ ಬಾಂಬ್ ಎಸೆಯಲಾಗಿತ್ತು. ಕೊಲ್ಲಂನಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸುವ ಸಮಯದಲ್ಲಿ ಇಬ್ಬರು ಪೊಲೀಸರಿಗೆ ಬೈಕ್ ಡಿಕ್ಕಿ ಹೊಡೆದಿತ್ತು.
ಯಾವುದೇ ಅನುಮತಿ ಪಡೆಯದೇ ಬಂದ್ ಕರೆ ಕೊಟ್ಟ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಕೇರಳ ಹೈಕೋರ್ಟ್ ಪಿಎಫ್‌ಐ ನಾಯಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿತು. ಮುಷ್ಕರ ಬೆಂಬಲಿಸದ ನಾಗರಿಕರು, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಲು ಸರ್ಕಾರಕ್ಕೆ ಸೂಚನೆ ನೀಡಿತ್ತು.