KARNATAKA
ಕೆಎಸ್ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಕನ ಜೊತೆ ಕೋಳಿಗೂ ಅರ್ಧ ಟಿಕೆಟ್
ಚಿಕ್ಕಬಳ್ಳಾಪುರ : ಕೆಎಸ್ಆರ್ ಟಿಸಿ ಬಸ್ ನಲ್ಲಿ ಕೋಳಿಗೂ ಅರ್ಧ ಟಿಕೆಟ್ ನೀಡಿರುವ ಘಟನೆ ನಡೆದಿದ್ದು, ಸದ್ಯ ಬಸ್ ಕಂಡಕ್ಟರ್ ಕೋಳಿಗೆ ಟಿಕೆಟ್ ನೀಡಿದ ಈ ಸುದ್ದಿಯ ಜತೆಗೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಠಾಣೆ ವ್ಯಾಪ್ತಿಯ ಪೆರೇಸಂದ್ರದ ವ್ಯಕ್ತಿ ನಾಟಿ ಕೋಳಿ ಹುಂಜ ಖರೀದಿಸಿ, ಸೋಮೇಶ್ವರಕ್ಕೆ ಹೋಗಲು ಚಿಕ್ಕಬಳ್ಳಾಪುರ ಘಟಕದ ಕೆಎಸ್ಸಾರ್ಟಿಸಿ ಬಸ್ ಹತ್ತಿದಾಗ ಇಷ್ಟೆಲ್ಲಾ ಬೆಳವಣಿಗೆ ನಡೆದಿದೆ. ಪೆರೇಸಂದ್ರದ ವ್ಯಕ್ತಿಗೆ ಕಂಡಕ್ಟರ್ 10 ರೂ. ಟಿಕೆಟ್ ನೀಡಿದರೆ, ಕೋಳಿ ಹುಂಜಕ್ಕೆ 5 ರೂ. ಟಿಕೆಟ್ ನೀಡಿದ್ದಾನೆ. ಟಿಕೆಟ್ ಪಡೆದ ಮಾಲೀಕ ಕೋಳಿಯನ್ನು ಸೀಟ್ ಮೇಲೆ ಕೂರಿಸಿ ಪ್ರಯಾಣ ಬೆಳೆಸಿದ. ಪ್ರಯಾಣಿಕರು ಕೋಳಿ ತೆಗೆದು ಸೀಟ್ ಬಿಟ್ಟು ಕೊಡಿ ಎಂದು ಕೇಳಿದಾಗ, ನಾನು ಟಿಕೆಟ್ ಪಡೆದಿದ್ದೇನೆ. ಹಾಗಾಗಿ ಕೋಳಿಯನ್ನು ನನ್ನ ಜತೆ ಸೀಟ್‌ನಲ್ಲಿ ಕೂರಿಸಿದ್ದೇನೆ ಎಂದು ಪ್ರಯಾಣಿಕ ಉತ್ತರ ನೀಡಿದ್ದಾನೆ.
ಕೋಳಿಗೆ ಅರ್ಧ ಟಿಕೆಟ್ ಹಾಕೋದು ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಕಡೆ ಸಾರಿಗೆ ಬಸ್ ನಿರ್ವಾಹಕರು ಕೋಳಿಗೆ ಅರ್ಧ ಟಿಕೆಟ್ ಹಾಕಿರೋದು ಸುದ್ದಿಯಾಗಿತ್ತು. ಸಾಮಾನ್ಯವಾಗಿ ನಿರ್ದಿಷ್ಟ ಕೆಜಿ ಅಥವಾ ಪ್ರಮಾಣಕ್ಕಿಂತ ಹೆಚ್ಚು ವಸ್ತುಗಳು ಅಥವಾ ಜೀವಿಗಳನ್ನು ಬಸ್‌ನಲ್ಲಿ ಪ್ರಯಾಣಿಕರ ಜೊತೆಗೆ ಕರೆದುಕೊಳ್ಳುವುದಾದರೆ ಬಸ್ ಕಂಡಕ್ಟರ್‌ಗಳು ಅರ್ಧ ಟಿಕೆಟ್ ವಿಧಿಸುತ್ತಾರೆ. ಅದರಂತೆ ಚಿಕ್ಕಬಳ್ಳಾಪುರ ಘಟಕದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪೆರೇಸಂದ್ರದಿಂದ ಗುಡಿಬಂಡೆ ತಾಲೂಕಿನ ಸೋಮೇಶ್ವರಕ್ಕೆ ಹೋಗುತ್ತಿದ್ದ ಪ್ರಯಾಣಿಕನಿಗೂ ಕೂಡ ಕಂಡಕ್ಟರ್ ಟಿಕೆಟ್ ಕೊಟ್ಟಿದ್ದಾರೆ