LATEST NEWS
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವಿರತ ಪ್ರಯತ್ನ – ಉಡುಪಿ ಕುಂದಾಪುರದಿಂದ ತಿರುಪತಿಗೆ ನೇರ ರೈಲು
ಕುಂದಾಪುರ ಅಕ್ಟೋಬರ್ 09: ಕಳೆದ ಕೆಲವು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಸಂಸದರಿದ್ದರೂ ಯಾವುದೇ ರೀತಿಯ ಕೇಂದ್ರ ಸರಕಾರ ಕೆಲಸವಾಗದೇ ಸಂಪೂರ್ಣ ಸ್ಥಬ್ದವಾಗಿದ್ದ ಜಿಲ್ಲೆಯಲ್ಲಿ ಇದೀಗ ಹೊಸ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಸರಕಾರದ ಸೇವೆಗಳನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಸಂಸದರಾದ ಬಳಿಕ ರೈಲ್ವೆ ಇಲಾಖೆಗೆ ಸಂಬಂಧಿಸಿದ ಹಳೆಯ ಬೇಡಿಕೆಗಳ ಬೆನ್ನತ್ತಿರುವ ಕೋಟ ಒಂದೊಂದೆ ರೈಲನ್ನು ಜಿಲ್ಲೆಗೆ ತರಲು ಪ್ರಯತ್ನಿಸುತ್ತಿದ್ದಾರೆ. ಅದರಲ್ಲಿ ಇದೀಗ ಉಡುಪಿ – ಕುಂದಾಪುರದಿಂದ ತಿರುಪತಿಗೆ ನೇರ ರೈಲು ಸೇವೆಗೆ ಭಾರತೀಯ ರೈಲ್ವೆ ಸಮ್ಮತಿ ಸೂಚಿಸಿದ್ದು, ಕೋಟ ಶ್ರೀನಿವಾಸ ಪೂಜಾರಿ ಅವರ ಕೆಲಸದ ವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಉಡುಪಿ ಜಿಲ್ಲೆಯಿಂದ ತಿರುಪತಿಗೆ ಹಲವಾರು ಜನರು ಹೋಗುತ್ತಿರುತ್ತಾರೆ. ತಿರುಪತಿ ಮತ್ತು ಉಡುಪಿ-ಕುಂದಾಪುರ ನಡುವೆ ನೇರ ರೈಲು ಸೇವೆ ಬೇಕು ಎನ್ನುವ ದಶಕಗಳ ಕನಸು ಇತ್ತು, ಆದರೆ ಜಿಲ್ಲೆಗೆ ಆಗಮಿಸಿದ್ದ ಸಂಸದರು ಯಾರೂ ಕೂಡ ಈ ವಿಚಾರವಾಗಿ ಯಾವುದೇ ಕೆಲಸ ಮಾಡಿರಲಿಲ್ಲ. ಆದರೆ ಮೊದಲ ಬಾರಿಗೆ ಉಡುಪಿ ಸಂಸದರಾದ ಕೋಟ ಅವಿರತ ಪ್ರಯತ್ನದಿಂದ ತಿರುಪತಿಗೆ ರೈಲನ್ನು ತಂದಿದ್ದಾರೆ.
ಹೈದರಾಬಾದಿನ ಕಾಚಿಗುಡದಿಂದ ಹೊರಟು ತಿರುಪತಿಯ ರೇಣಿಗುಂಟ ನಿಲ್ದಾಣದ ಮೂಲಕ ಮಂಗಳೂರಿಗೆ ಬರುತಿದ್ದ ಕಾಚಿಗುಡ-ಮಂಗಳೂರು ವಾರಕ್ಕೆರಡು ದಿನದ ರೈಲನ್ನು ಉಡುಪಿ ಕುಂದಾಪುರದ ಮೂಲಕ ಮುರುಡೇಶ್ವರಕ್ಕೆ ವಿಸ್ತರಣೆ ಮಾಡುವ ಸಂಸದರ ಕೋರಿಕೆಯನ್ನು ಮನ್ನಿಸಿ ಭಾರತೀಯ ರೈಲ್ವೆ ಆದೇಶ ಹೊರಡಿಸಿದೆ.
ಬುಧವಾರ ಮತ್ತು ಶನಿವಾರ ಸಂಜೆ 5 ಗಂಟೆಗೆ ಕುಂದಾಪುರ ಉಡುಪಿ ಮಾರ್ಗದ ಮೂಲಕ ಹೊರಡುವ ರೈಲು ಮರುದಿನ ಬೆಳಗ್ಗೆ 11 ಗಂಟೆಗೆ ತಿರುಪತಿ ಬಳಿಯ ರೇಣಿಗುಂಟ ನಿಲ್ದಾಣದ ಮೂಲಕ ಹೈದರಾಬಾದಿನ ಕಾಚಿಗುಡ ತಲುಪಲಿದೆ. ಮುರುಡೇಶ್ವರದ ಮೂಲಕ ಕುಂದಾಪುರ, ಉಡುಪಿ, ಸುರತ್ಕಲ್, ಮೂಲ್ಕಿ ನಗರಗಳು, ಕೊಯಂಬತ್ತೂರು, ತಿರುಪತಿ, ಮಂತ್ರಾಲಯ ಸಮೀಪದ ದೊನೆ ಜಂಕ್ಷನ್ ಸೇರಿದಂತೆ ಹೈದರಾಬಾದ್‌ವರೆಗೆ ರೈಲು ಸಂಪರ್ಕ ದೊರಕಿದಂತಾಗಿದೆ.
ಸ್ವಾತಂತ್ರ್ಯದ 76 ವರ್ಷಗಳ ಬಳಿಕ ದಕ್ಷಿಣದ ಎಲ್ಲ ರಾಜ್ಯಗಳ ಜತೆ ಕೊಂಕಣ ರೈಲ್ವೆ ಮೂಲಕ ರೈಲು ಸಂಪರ್ಕ ಲಭಿಸಿದ್ದು, ಪುಣ್ಯ ಕ್ಷೇತ್ರ ತಿರುಪತಿಯನ್ನು ಉಡುಪಿ ಶ್ರೀಕೃಷ್ಣ, ಕೊಲ್ಲೂರು ಮೂಕಾಂಬಿಕಾ ದೇಗುಲದ ಮೂಲಕ ಮುರುಡೇಶ್ವರದವರೆಗೆ ನಾನಾ ಪುಣ್ಯಸ್ಥಳಗಳಿಗೆ ರೈಲು ಸಿಕ್ಕಂತಾಗಿದೆ ಎಂದು ಸಂಸದ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ. ಮನವಿಗೆ ಅತ್ಯಂತ ಕ್ಷಿಪ್ರವಾಗಿ ಮನವಿಗೆ ಸ್ಪಂದಿಸಿದ ಭಾರತೀಯ ರೈಲ್ವೆಯ ಹಲವು ಅಧಿಕಾರಿಗಳಿಗೆ, ರೈಲ್ವೆ ರಾಜ್ಯ ಸಚಿವ ಸೋಮಣ್ಣ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಅಭಾರಿಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ.