Connect with us

    LATEST NEWS

    ಕೊಲ್ಲೂರು ಬ್ರಹ್ಮಕಲಶೋತ್ಸವ ಹಿನ್ನಲೆ – ಮೇ 2 ಮತ್ತು 3 ರಂದು ಭಕ್ತರಿಗೆ ಮೂಕಾಂಬಿಕೆಯ ದರ್ಶನಕ್ಕೆ ಅವಕಾಶವಿಲ್ಲ

    ಕೊಲ್ಲೂರು ಎಪ್ರಿಲ್ 25: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಎಪ್ರಿಲ್ 30 ರಿಂದ ಮೇ 11 ರ ವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ. ಈ ಹಿನ್ನಲೆ ಬ್ರಹ್ಮಕಲಶೋತ್ಸವದ ಅಂಗವಾಗಿ ಪೀಠ ಚಲನೆ ಪ್ರಕ್ರಿಯೆ ನಡೆಯುವುದರಿಂದ ಮೇ 2 ಮತ್ತು 3ರಂದು ಭಕ್ತರಿಗೆ ಶ್ರೀ ದೇವಿಯ ದರ್ಶನಕ್ಕೆ ಅವಕಾಶವಿಲ್ಲ ಎಂದು ಕ್ಷೇತ್ರದ ಆಡಳಿತ ಮಂಡಳಿ ತಿಳಿಸಿದೆ.


    ಕೊಲ್ಲೂರು ಶ್ರೀ ಮೂಕಾಂಬಿಕೆ ದೇಗುಲಕ್ಕೆ ಇತ್ತೀಚೆಗೆ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕೆಲವು ದಿನಗಳಿಂದ ಪ್ರತೀ ದಿನ ಸರಾಸರಿ 15 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುತ್ತಿದ್ದು, ದೇವರ ದರ್ಶನ ಪಡೆಯುತ್ತಿದ್ದಾರೆ. ಈ ನಡುವೆ ಕೊಲ್ಲೂರು ಮೂಕಾಂಬಿಕೆಗೆ 21 ವರ್ಷಗಳ ಬಳಿಕ ಬ್ರಹ್ಮಕಲಶೋತ್ಸವ ನಡೆಯಲಿದೆ. ಎಪ್ರಿಲ್ 30ರಿಂದ ಮೇ 11ರ ತನಕ ಕೊಲ್ಲೂರು ದೇಗುಲದಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಿದ್ಧತೆ ಭರದಿಂದ ಸಾಗುತ್ತಿದೆ. 1972 ರಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು. ಅನಂತರ 2002ರಲ್ಲಿ ನಡೆದಿದೆ. ಇದೀಗ 21 ವರುಷಗಳ ಅನಂತರ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ.


    ಎಪ್ರಿಲ್ 30ರಿಂದ ಧಾರ್ಮಿಕ ವಿಧಿ ವಿಧಾನ ನಡೆಯಲಿವೆ. ಮೇ 1ರಂದು ಪೀಠ ಚಲನೆ, ಮೇ 4ರಂದು ಸಹಸ್ರ ಕಲಶ ಸ್ಥಾಪನೆ, ಮೇ 5ರಂದು ಸಹಸ್ರ ಕಲಶದೊಂದಿಗೆ ಬ್ರಹ್ಮಕಲಶಾಭಿಷೇಕ, ಮೇ 9ರಂದು ಬ್ರಹ್ಮರಥೋತ್ಸವ ಹಾಗೂ ಮೇ 11ರಂದು ಪೂರ್ಣ ಕುಂಭಾಭಿಷೇಕ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹಾಗೂ ಕಾರ್ಯನಿರ್ವಹಣಾ ಕಾರಿ ಎಸ್‌.ಸಿ. ಕೊಟಾರಗಸ್ತಿ ತಿಳಿಸಿದ್ದಾರೆ. ಇನ್ನು ಬ್ರಹ್ಮಕಲಶೋತ್ಸವದ ಅಂಗವಾಗಿ ಪೀಠ ಚಲನೆ ಪ್ರಕ್ರಿಯೆ ನಡೆಯುವುದರಿಂದ ಮೇ 2 ಮತ್ತು 3ರಂದು ಭಕ್ತರಿಗೆ ಶ್ರೀ ದೇವಿಯ ದರ್ಶನಕ್ಕೆ ಅವಕಾಶವಿಲ್ಲ ಎಂದು ಕ್ಷೇತ್ರದ ಆಡಳಿತ ಮಂಡಳಿ ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply