UDUPI
ಕೊಡಂಗಳದ ಈ ಕೋರಿ ರೊಟ್ಟಿಗಿದೆ ಕಡಲಾಚೆಯೂ ಬೇಡಿಕೆ!
ವರದಿ: ಮಂಜುನಾಥ್ ಕಾಮತ್
ಉಡುಪಿ : ಸೆಗಣಿ ನೀರಲ್ಲಿ ಗುಡಿಸಿದ ನೆಲ. ಗೂಟಕ್ಕೆ ಕಟ್ಟಿದ ಹತ್ತು ಹದಿನೈದು ಅಂಕದ ಕೋಳಿಗಳು. ಗದ್ದೆ ಹುಣಿಯ ಅಂಚಿನಲ್ಲಿ ಅವಳು ಕಾಣಿಸುವುದೇ ತಡ ಕಿಟಕಿಯ ಸರಳಿಗೆ ಕಟ್ಟಿ ಹಾಕಿದ ನಾಯಿಗಳ ಬೊಬ್ಬೆ. ಮನೆಯ ಯುವಕರು ಚುರುಕು! ಸಮಯ ವ್ಯರ್ಥವಿಲ್ಲ. ಒಂದಷ್ಟು ಕಲ್ಲುಗಳನ್ನು ಜೋಡಿಸಿ ಅಂಗಳದಲ್ಲೇ ಒಲೆ ನಿರ್ಮಿಸಲಾಗುತ್ತದೆ. ಕಟ್ಟಿಗೆಗಳ ರಾಶಿಯನ್ನೂ ಪಕ್ಕದಲ್ಲೇ ತಂದು ಹೇರಲಾಗುತ್ತದೆ. ಕಡೆಯುವ ಕಲ್ಲಿಗೆ ಸೋನಾಮಸೂರಿ ಅಕ್ಕಿಯ ನುಚ್ಚು, ಉದ್ದು, ಜೀರಿಗೆ, ಉಪ್ಪು ಬೀಳುತ್ತದೆ. ಅವಳು ಅಂಗಳದಲ್ಲಿ ನಿಂತದ್ದೇ ಕುಳಿತುಕೊಳ್ಳಲು ಕಾಲು ಮಣೆ ಊಐಕೊಟ್ಟರಾಯ್ತು. ಹಿಟ್ಟು ತಯಾರಾಗುವ ಹೊತ್ತಿಗೆ ಕಾವಲಿ ಹದವಾಗುತ್ತದೆ.
ಅವಳು ಅಂದರೆ ಕಮಲ, ಜಲಜ, ಪಿಲ್ಲು, ಗುಲಾಬಿ, ಬೇಬಿ. ಯಾರೂ ಆಗಿರಬಹುದು. ಕಾದ ಕಾವಲಿಗೆ ನೀರ ಹನಿಗಳನ್ನು ಚಿಮುಕಿಸಿ ಉಷ್ಣತೆಯನ್ನು ಪರೀಕ್ಷಿಸಲಾಗುತ್ತದೆ. ಬೋಗುಣಿ ಅಥವಾ ದೊಡ್ಡ ಸೌಟಿನಲ್ಲಿ ಹಿಟ್ಟನ್ನು ಕಾವಲಿಗೆ ಸುರಿದು, ತೆಳ್ಳಗೆ ಸವರಿದ ಮೇಲೆ ಬಿಸಿ ಹೊಗೆಯೊಂದು ಏಳುತ್ತದಲ್ಲ! ಅಂಗಳದಲ್ಲಿದ್ದ ಕೋಳಿಗಳೂ ಆ ಹೊತ್ತಿಗೊಮ್ಮೆ ಕತ್ತು ಮೇಲೆತ್ತುತ್ತವೆ. ಸೋರ್ತಿ, ಮಾರಿ, ತಂಬಿಲ, ತಮ್ಮಣದ ಊಟಕ್ಕೆ ಅದಾವುದರ ತಲೆ ಬಲಿಯಾಗುತ್ತದೋ, ಅವುಗಳಿಗೂ ಗೊತ್ತಿಲ್ಲ. ಒಲೆಯನ್ನು ಸುತ್ತುವರಿದ ಮಕ್ಕಳ ಬಾಯಲ್ಲಂತೂ ನೀರು ಸುರಿಯುತ್ತದೆ.
ಇಡೀ ಮನೆಯವರಿಗೆ ನಾಟಿ ಕೋಳಿ ಸುಕ್ಕ, ಸಾರು ಮತ್ತು ಊರ ರೊಟ್ಟಿಯ ಊಟದ್ದೇ ಕನಸು. ಕಾವಲಿಯಿಂದ ತೆಗೆದ ರೊಟ್ಟಿಯನ್ನು ಸ್ವಲ್ಪ ಹೊತ್ತು ಬಿಸಿಲಿಗೆ ಹಾಕೋದಕ್ಕಿದೆ. ಒಣಗಿಸಲು ಇಟ್ಟಲ್ಲಿಂದಲೇ, ಜಾಸ್ತಿ ಸುಟ್ಟು ಕೆಂಪಗಾದ ರೊಟ್ಟಿಯ ತುಂಡನ್ನು ಹುಡುಕಿ, ಎಗರಿಸಿ, ಕುರು ಕುರು ಎಂದು ತಿನ್ನುವುದಿದೆಯಲ್ಲ! ಊ ಕೋಳಿ ರೊಟ್ಟಿಗೋಸ್ಕರವೇ ಮತ್ತೆ ಮತ್ತೆ ತುಳುನಾಡಲ್ಲೇ ಹುಟ್ಟಬೇಕೆನಿಸುತ್ತದೆ.
ಹಿಂದಿನ ಕಾಲದ ಹಳ್ಳಿ ಮನೆಗಳಲ್ಲಿ ಒಬ್ಬರಿಗಾದರೂ ರೊಟ್ಟಿಯ ವಿದ್ಯೆ ಗೊತ್ತಿತ್ತು. ಊರಲ್ಲಿ ಒಂದೆರಡು ಹೆಂಗಸಾದರೂ ಮನೆ ಮನೆಗೆ ಹೋಗಿ ರೊಟ್ಟಿ ತಯಾರಿಸುವ ಕಾಯಕದಲ್ಲಿ ಹೆಸರು ಪಡೆದವರುಂಟು. ಆದರೀಗ ಈ ಸರಳ ವಿದ್ಯೆ ಮರೆತೇ ಹೋದಂತಿದೆ. ಕೊಡಂಗಲದ ಶಾರದಕ್ಕನ ಕಥೆಯೂ ಅಷ್ಟೇ ಆಗಿತ್ತು. ಅವರ ಅಮ್ಮ, ಅಜ್ಜಿ ಮಾಡ್ತಿದ್ದರು. ಗಂಡನ ಮನೆಯಲ್ಲಿ ಅತ್ತೆಯ ಕೈರುಚಿಯೂ ಚೆನ್ನಾಗಿತ್ತು. ಅಂಗಡಿಯಲ್ಲಿ ಸಿಗೋಕೆ ಶುರುವಾದ ಮೇಲೆ ಆ ರಗಳೆ ಯಾರಿಗೆ ಬೇಕು? ಗರಿ ಗರಿಯಾದ, ರುಚಿಕಟ್ಟಾದ, ಹಿಟ್ಟಿಗೆ ಯಾವುದೇ ಕಲಬೆರಕೆ ಇಲ್ಲದ, ಆರೋಗ್ಯಕರ ತಿನಿಸು ಬರೀ ನೆನಪು ಮಾತ್ರ ಅಂದುಕೊಂಡಾಗ ಅವರ ಕುಟುಂಬದಲ್ಲಿ ಎದುರಾದ ಅನಿವಾರ್ಯವೊಂದು ರೊಟ್ಟಿಯ ಕಾಯಕವನ್ನು ಮುಂದುವರೆಸುವಂತೆ ಮಾಡಿತು.
ಶಾರದಕ್ಕನಿಗೆ ಒಟ್ಟು ಮೂರು ಜನ ಹೆಣ್ಮಕ್ಕಳು. ಮೂವರಿಗೂ ಮದುವೆಯಾಗಿದೆ. ಇಬ್ಬರು ಮುಂಬೈಯಲ್ಲಿದ್ದರೆ ಕಡೆಯವಳನ್ನು ಮನೆಯಲ್ಲೇ ಇರಿಸಿಕೊಂಡಿದ್ದಾರೆ. ಅಳಿಯ ಆಟೋ ಚಾಲಕ. ಆದರೆ ಅದೊಂದು ದಿನ ಅಪಘಾತವಾಗಿ ರಿಕ್ಷಾ ಮಗುಚಿ ಬೀಳುತ್ತದೆ. ಪ್ರವೀಣ್ ಪೂಜಾರಿಯವರ ಕಾಲಿನ ಎಲುಬು ಮುರಿಯುತ್ತೆ . ಮುಂದಿನ ಆರು ತಿಂಗಳು ಅವರು ಮನೆಯಲ್ಲೇ.
ಶಾರದಕ್ಕ ಹಾಗೂ ಹಿರಿಯಣ್ಣ ದಂಪತಿಗಳದ್ದು ಸಣ್ಣ ಮಟ್ಟದ ಬೇಸಾಯದ ಮನೆ. ಆರ್ಥಿಕ ಸ್ಥಿತಿ ಅಷ್ಟಕ್ಕಷ್ಟೆ. ಅಳಿಯನಿಗೆ ಬೇಸರ, ಪಶ್ಚತ್ತಾಪ. ಕಾಲಿನ ಮೂಳೆಯೇ ಮುರಿದದ್ದರಿಂದ ಹೊರಗೆಲ್ಲೂ ಕೆಲಸಕ್ಕೆ ಹೋಗುವಂತಿಲ್ಲ. ಆಲೋಚನೆ ಮಾಡಿ ಮಾಡಿ ಕೊನೆಗೆ ಅತ್ತೆಯ ಬಳಿ ಕೇಳಿಯೇ ಬಿಟ್ಟರು. ನೀವು ಹಿಂದೆ, ಮನೆಯ ಖರ್ಚಿಗೆ ಅಕ್ಕಿ ರೊಟ್ಟಿ ಮಾಡ್ತಿದ್ರಿ ಅಂತಿದ್ರಲ್ಲ. ಈಗ ಮತ್ತೆ ಮಾಡ್ಬಹುದಾ? ನಮ್ಗೆ ಕಲಿಸಿಕೊಡ್ಬಹುದಾ? ಒಂದಷ್ಟು ಅಂಗಡಿಗಳನ್ನು ಗೊತ್ತು ಮಾಡ್ಕೋಬಹುದು. ಕೂತಲ್ಲೇ ಮಾಡಬಹುದಾದ ಕೆಲಸವಿದು ಎಂದು ಕೇಳಿಕೊಂಡರು. ಶಾರದಕ್ಕನಿಗೆ ಅಳುಕು. ನಾವು ನಾವೇ ತಿನ್ನೋಕೆ ಮಾಡ್ತಿದ್ದದ್ದು. ಮಾರೋದಕ್ಕಾಗುತ್ತಾ? ಬೇರೆಯವ್ರಿಗಿದು ಇಷ್ಟವಾಗುತ್ತಾ?
ಮಗಳು, ಅಳಿಯ ಹಠ ಬಿಡಲೇ ಇಲ್ಲ. ಮನೆಯೊಳಗಿದ್ದೇ ಒಲೆ, ಸಣ್ಣ ಕಾವಲಿಯಲ್ಲಿ ಮಾಡೋಕೆ ಶುರು ಮಾಡಿದರು. ಅಳಿಯ ಬೇರೊಂದು ರಿಕ್ಷಾ ಗೊತ್ತು ಮಾಡಿ ಊರ ಅಂಗಡಿಗಳಿಗೆ ಅಲೆದರು. ಮೊದಲ ದಿನ ಸ್ಯಾಂಪಲ್ ಗಳನ್ನು ಕೊಟ್ಟು ಬಂದರು. ಮರು ದಿನ ಆಶ್ಚರ್ಯ. ಅಂಗಡಿಗಳಿಂದ ಒಳ್ಳೆಯ ಬೇಡಿಕೆ ಬರಲಾರಂಭಿಸಿತು. 20 ಕೇಜಿ ಅಕ್ಕಿಯಿಂದ ಹಿಡಿದು ದಿನಕ್ಕೆ 100 ಕೇಜಿ ರೊಟ್ಟಿಯವರೆಗೂ ಡಿಮಾಂಡ್ ಬರಲು ಶುರು.
ಶಾರದಕ್ಕನ ಕೈಗುಣವಿರಬೇಕು. ಸಾಮಾನ್ಯ ಊರ ರೊಟ್ಟಿ ಇಷ್ಟೊಂದು ಗರಿ ಗರಿಯಾಗಿರುವುದಿಲ್ಲ. ಆದರಿವರ ಶ್ರೀ ವಿಷ್ಣು ಅಕ್ಕಿ ರೊಟ್ಟಿ ತೆಳುವಾಗಿ, ಗರಿ ಗರಿಯಾಗಿ ಬಾಯೊಳಗೆ ಹಾಕಿದ ಕೂಡಲೇ ನೀರು! ಹೀಗೆ ರೊಟ್ಟಿಯ ವ್ಯಾಪಾರ ಶುರುವಾಗಿ 8 ವರ್ಷಗಳಾಗಿವೆ. ಪ್ರತೀ ದಿನ ಬೆಳಿಗ್ಗೆ 5 ಗಂಟೆಗೆಯಿಂದ 11 ಗಂಟೆಯ ವರೆಗೆ ಹೊಗೆ ಹಾಗೂ ತಡೆಯಲಾಗದ ಬಿಸಿಯ ನಡುವೆ ತಯಾರಿ. ಆ ನಂತರ ಪ್ಯಾಕಿಂಗ್. ಮಧ್ಯಾಹ್ನದ ಬಳಿಕ ಅಂಗಡಿಗಳಿಗೆ ವಿತರಣೆ.
ಉಡುಪಿಯಲ್ಲೂ ಕೊಡಂಗಳದ ಈ ರೊಟ್ಟಿಗೆ ಬಹಳ ಬೇಡಿಕೆ ಇದೆ. ಶ್ರೀ ವಿಷ್ಣು ರೊಟ್ಟಿಯೇ ಬೇಕೆಂದು ಹಠ ಹಿಡಿಯುವ ಗ್ರಾಹಕರಿದ್ದಾರೆ. ಆದರೆ ಮನೆಯ ಈ ಮೂವರಷ್ಟೇ ಸೇರಿ ಮಾಡುವುದರಿಂದ, ಸಣ್ಣ ಶೆಡ್ ಒಂದರ ಅಡಿಯಲ್ಲಿ ಸೀಮಿತ ಪ್ರಮಾಣದಲ್ಲಷ್ಟೇ ತಯಾರಿಸಲು ಸಾಧ್ಯವಾಗ್ತಿದೆ. ತಮ್ಮ ಮನೆಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಗುಡ್ಡೆಯಂಗಡಿ, ಕೊಡಂಗಳ, ದೆಂದೂರುಕಟ್ಟೆ, ಕುಕ್ಕಿಕಟ್ಟೆ, ಕುಂತಲನಗರ, ಮರ್ಣೆಯ ಅಂಗಡಿಗಳಲ್ಲೇ ಇವರು ತಯಾರಿಸಿದ ರೊಟ್ಟಿ ಮುಗಿಯುತ್ತದೆ. ಕೆಲವು ಕೆಟರಿಂಗ್ ಸಂಸ್ಥೆಗಳು ಮೊದಲೇ ಹೇಳಿಟ್ಟು, ಮನೆಗೇ ಬಂದು ಖರೀದಿಸುವುದುಂಟು. ಬೆಂಗ್ಳೂರು, ಮುಂಬೈ, ದುಬೈಗೂ ಇವರ ರೊಟ್ಟಿ ಹೋಗುವುದುಂಟು.
ಸರಕಾರ ನೆರವಾದರೆ ಸಣ್ಣ ಪ್ರಮಾಣದ ಉದ್ಯಮವನ್ನಾಗಿಸುವ ಕನಸು ಈ ಕುಟುಂಬದ್ದು. ಬ್ಯಾಂಕುಗಳಲ್ಲಿ ವಿಚಾರಿಸಿದಾಗ ಸಾಮಾನ್ಯ ಸಾಲ ವ್ಯವಸ್ಥೆ ಬಿಟ್ಟರೆ ವಿಶೇಷ ನೆರವು, ಸಬ್ಸಿಡಿ ಇಲ್ಲವೆಂದರಂತೆ. ಆತ್ಮನಿರ್ಭರ ಭಾರತ ಕಟ್ಟುವ ಪ್ರತಿಜ್ಞೆಗಳಾಗುತ್ತಿರುವ ಈ ಹೊತ್ತಿನಲ್ಲಿ ಕಡಲಾಚೆಗೂ ಬೇಡಿಕೆ ಇರುವ ಕೊಡಂಗಲದ ಈ ರೊಟ್ಟಿಯ ತಯಾರಿ, ಮಾರಾಟದ ವಿಸ್ತರಣೆಗೆ ಸರಕಾರದಿಂದ ಸಹಕಾರ ದೊರೆಯಲಿ ಎಂಬೊಂದು ಆಶಯ.