ಕಿನ್ನಿಗೋಳಿ : ಮಂಗಳೂರಿನ ಮೀನಿನ ಕಾರ್ಖಾನೆಯೊಂದರಿಂದ ಕೊಳೆತ ತ್ಯಾಜ್ಯವನ್ನು ಕಿನ್ನಿಗೋಳಿ ಸಮೀಪ ನಿಡ್ಡೋಡಿಯ ಕೊಲೆತ್ತರಪದವು ಎಂಬಲ್ಲಿ ತಂದು ಸುರಿಯುವಾಗ ಸ್ಥಳೀಯ ಗ್ರಾಮಸ್ಥರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಬಂಗೇರಪದವಿನ ಕೊಲೆತ್ತರಪದವು ಎಂಬಲ್ಲಿ ಗಂಜಿಮಠದ ಗಾಡ್ಫ್ರೆ ಕ್ರಾಸ್ತಾ ಎಂಬುವರಿಗೆ ಸೇರಿದ ಕೆಂಪು ಕಲ್ಲಿನ ಕ್ವಾರಿಗೆ ಕೆಲವು ದಿನಗಳಿಂದ ವಾಹನದಲ್ಲಿ ಕೊಳೆತ ಮೀನಿನ ತ್ಯಾಜ್ಯವನ್ನು ರಹಸ್ಯವಾಗಿ ತಂದು ಸುರಿಯಲಾಗುತ್ತಿತ್ತು . ಸೋಮವಾರ ರಾತ್ರಿ ಕೊಳೆತ ಪದಾರ್ಥವನ್ನು ಮಿನಿ ಲಾರಿಯಲ್ಲಿ ಬರುವುದನ್ನು ಗಮನಿಸಿ ಹಿಂಬಾಲಿಸಿದ ಗ್ರಾಮಸ್ಥರು ಕೊಲೆತ್ತರಪದವಿನಲ್ಲಿ ವಿಲೇವಾರಿ ಮಾಡಲು ಬಿಡದೆ ಲಾರಿಗೆ ತಡೆಯೊಡ್ಡಿದರು. ಜಾಗದ ಮಾಲೀಕ ಮತ್ತು ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಈ ಸಂದರ್ಭ ಪೊಲೀಸ ಸ್ಥಳಕ್ಕೆ ಆಗಮಿಸಿದರು. ರಾತ್ರಿಯೇ ತ್ಯಾಜ್ಯವನ್ನೆಲ್ಲ ಖಾಲಿ ಮಾಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದರು. ಕಲ್ಲಮುಂಡ್ಕೂರು ಪಿಡಿಒ ಪ್ರಶಾಂತ್ ಶೆಟ್ಟಿ ಮೂಡುಬಿದಿರೆಯ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಆಗಮಿಸಿ, ಸ್ಥಳದ ಮಾಲಕ, ಲಾರಿ ಚಾಲಕ , ಜೆಸಿಬಿ ಚಾಲಕ ಸಂಯುಕ್ತವಾಗಿ ರಸ್ತೆಯಲ್ಲಿ ಬಿದ್ದ ತ್ಯಾಜ್ಯವನ್ನು ತೆಗೆಯಬೇಕು ಎಂದು ಎಚ್ಚರಿಸಿದರು.