LATEST NEWS
ಮಂಗಳೂರಿನಲ್ಲಿ ಯುಪಿ ಬಿಹಾರ ಮಾದರಿ ಕಾಸಿಗಾಗಿ ಅಪಹರಣ ಹಲ್ಲೆ : ಕಾಲೇಜು ವಿದ್ಯಾರ್ಥಿ ಗಂಭೀರ
ಮಂಗಳೂರಿನಲ್ಲಿ ಯುಪಿ ಬಿಹಾರ ಮಾದರಿ ಕಾಸಿಗಾಗಿ ಅಪಹರಣ ಹಲ್ಲೆ : ಕಾಲೇಜು ವಿದ್ಯಾರ್ಥಿ ಗಂಭೀರ
ಮಂಗಳೂರು, ಡಿಸೆಂಬರ್ 07 : ಯುಪಿ, ಬಿಹಾರ ಗಳಲ್ಲಿ ನಡೆಯುತ್ತಿದ್ದ ಹಣಕ್ಕಾಗಿ ನಡೆಯುತ್ತಿರುವ ಕಿಡ್ನಾಪ್ ಪ್ರಕರಣಗಳು ಇದೀಗ ಕರಾವಳಿ ನಗರ ಮಂಗಳೂರಿಗೂ ವ್ಯಾಪಿಸಿದೆ.
ಇದಕ್ಕೆ ಪುಷ್ಟಿ ಎಂಬಂತೆ ಇತ್ತಿಚೆಗೆ ಮಂಗಳೂರಿನಲ್ಲೂ ಹಣದ ಬೇಡಿಕೆ ಇಟ್ಟು ಅಪಹರಣ ನಡೆಸಿ ಹಲ್ಲೆ ಮಾಡಿ ಲೂಟ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಶೈಕ್ಷಣಿಕ ಕ್ಷೇತ್ರಕ್ಕೂ ಇದು ವಿಸ್ತರಿಸಿದ್ದು ಇಂತಹುದೇ ಪ್ರಕರಣ ಇದೀಗ ಬಯಲಿಗೆ ಬಂದಿದೆ.
ಸ್ಥಳಿಯ ಕಾಲೇಜೊಂದರಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವನ್ನು ಹಣಕ್ಕಾಗಿ ಅಪಹರಿಸಿ, ತೀವ್ರ ಹಲ್ಲೆ ಮಾಡಲಾಗಿದೆ.
ಮಂಗಳೂರು ನಗರದ ಫಳ್ನೀರಿನ ನಿವಾಸಿ ಶಿಮಾಕ್ ಹಸನ್(22) ಅವನೇ ಅಪಹೃತ ವಿದ್ಯಾರ್ಥಿಯಾಗಿದ್ದಾನೆ.
ಅಪರಣ ನಡೆಸಿದವರೂ ಕಾಲೇಜು ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ. 2 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಪೊಲಿಸರು ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸುತ್ತಿದ್ದಾರೆ.
ಘಟನೆಯ ವಿವರ :
ಶಿಮಾಕ್ ನಗರದ ಖ್ಯಾತ ಕಾಲೇಜೊಂದರಲ್ಲಿ ಬಿಬಿಎಂ ವ್ಯಾಸಾಂಗ ಮಾಡುತ್ತಿದ್ದ. ಡಿ.5 ರಂದು ಸಂಜೆ 5 ಗಂಟೆಗೆ ಅತ್ತಾವರದ ಮಳಿಗೆಯೊಂದರಲ್ಲಿ ಸ್ನೇಹಿತರೊಂದಿಗೆ ಕಾಫಿ ಕುಡಿಯುತ್ತಿದ್ದರು.
ಆಗ ಬೈಕಿನಲ್ಲಿ ಬಂದ ಶಿಮಾಕ್‌ನ ಕ್ಲಾಸ್‌ಮೇಟ್ ಎನ್ನಲಾದ ಅಂಕಿತ್, ನಿನ್ನಲ್ಲಿ ಸ್ವಲ್ಪ ಕೆಲಸವಿದೆ ಬಾ ಎಂದು ಬೈಕಿನಲ್ಲಿ ಕರೆದೊಯ್ದಿದ್ದಾನೆ.
ಅರ್ಧ ಗಂಟೆ ಕಳೆದರೂ ಶಿಮಾಕ್ ವಾಪಸಾಗದ ಕಾರಣ ಸ್ನೇಹಿತರು ಮೊಬೈಲ್‌ನಲ್ಲಿ ಸಂಪರ್ಕಿಸಲು ಪ್ರಯತ್ನಿಸದ್ದಾರೆ.
ಮೊದಲು ಆ ಕಡೆಯಿಂದ ಕರೆಯನ್ನು ಸ್ವೀಕರಿಸಿರಲಿಲ್ಲ.
ಬಳಿಕ ಮತ್ತೂಂದು ಮೊಬೈಲ್‌ನಿಂದ ನಿರಂತರ ಪ್ರಯತ್ನಿಸಿದಾಗ ಕರೆ ಸ್ವೀಕರಿಸಿದ ಆ ಕಡೆಯ ವ್ಯಕ್ತಿ “ಶಿಮಾಕ್‌ನನ್ನು ಮೂಡುಬಿದಿರೆಗೆ ಕರೆದೊಯ್ಯುತ್ತಿದ್ದೇವೆ’ ಎಂದು ಹೇಳಿಕರೆ ಮಾಡಿದ್ದಾನೆ.
ಬಳಿಕ ಮತ್ತೆ ರಾತ್ರಿ ವೇಳೆ ಕರೆ ಮಾಡಿದ ಆ ವ್ಯಕ್ತಿ ನಮಗೆ 50,000 ರೂ. ಕೊಡಬೇಕು. ಇಲ್ಲದಿದ್ದರೆ ಶಿಮಾಕ್‌ನನ್ನು ಬಿಡುವುದಿಲ್ಲ ಎಂದು ಹೇಳಿ ಕರೆ ಮಾಡಿದ್ದಾನೆ.
ಕೆಲವು ಗಂಟೆಗಳ ಬಳಿಕ ಮತ್ತೆ ಕರೆ ಮಾಡಿ ಆತನನ್ನು ಕೊಲ್ಲುವುದಾಗಿ ಬೆದರಿಸಿದ್ದಾನೆ.
ಬಳಿಕ ನಗರದ ನಂತೂರು ಕೆಪಿಟಿ ಬಳಿ ದುಷ್ಕರ್ಮಿಗಳಿಗೆ ಶಿಮಾಕ್ ಕಡೆಯವರು ಹಣ ತಲುಪಿಸಿದ್ದಾರೆ. ನಂತರ ಶಿಮಾಕ್‌ನನ್ನು ಸ್ವಿಫ್ಟ್ ಕಾರಿನಿಂದ ತಳ್ಳಿ ತಂಡ ಕಾರಿನಲ್ಲೇ ಪರಾರಿಯಾಗಿದೆ.
ದುಷ್ಕರ್ಮಿಗಳ ಬಂಧನದಲ್ಲಿದ್ದಾಗ ಶಿಮಾಕ್ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ.
ಕಬ್ಬಿಣದ ರಾಡ್‌ನಿಂದ ತಲೆ, ಮುಖ ಮತ್ತು ಬೆನ್ನಿಗೆ ಅಪಹರಣಕಾರರು ಹಲ್ಲೆ ನಡೆಸಿದ್ದಾರೆ. ಸಿಗರೇಟ್‌ನಿಂದ ದೇಹದ ಮೇಲೆ ಅಲ್ಲಲ್ಲಿ ಸುಟ್ಟಿದ್ದಾರೆ. ಅವರ ಬೆನ್ನಿನ ಭಾಗ ಜರ್ಝರಿತಗೊಂಡಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಶಿಮಾಕ್ ನನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳ ಬಂಧನಕ್ಕೆ ಪಾಂಡೇಶ್ವರ ಪೊಲೀಸರು ಬಲೆ ಬೀಸಿದ್ದಾರೆ. ಅಪಹರಣಕ್ಕೆ ಬಳಸಿದ ಸ್ವಿಫ್ಟ್ ಕಾರನ್ನು ಪೊಲಿಸರು ಪತ್ತೆ ಹಚ್ಚಿ ವಶ ಪಡಿಸಿಕೊಂಡಿದ್ದು ಆರೋಪಿಗಳು ಹಲ್ಲೆಗೆ ಬಳಸಿದ್ದ ಎನ್ನಲಾದ ಕಬ್ಬಿಣದ ರಾಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆದರೆ ಇದು ನಿಜವಾಗಿಯೂ ಹಣಕ್ಕಾಗಿ ನಡೆದ ಅಪಹರಣವೋ ಅಥವಾ ಹಣದ ವ್ಯವಹಾರದಿಂದ ಕೃತ್ಯ ನಡೆದಿದೆಯೋ ಎಂಬ ಅನುಮಾನ ವ್ಯಕ್ತವಾಗಿದೆ.
ಈ ಬಗ್ಗೆ ತನಿಖೆ ಮಂದುವೆರೆದಿದ್ದು, ಪ್ರಕರಣ ತನಿಖೆಯ ಹಂತದಲ್ಲಿದ್ದು ಈ ಬಗ್ಗೆ ಈಗಾಗಲೇ ಏನು ಹೇಳಲು ಸಾಧ್ಯವಿಲ್ಲ, ತನಿಖೆಯ ಬಳಿಕ ಮಾಹಿತಿ ನೀಡಲಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.