BELTHANGADI
ಉಜಿರೆ ಬಾಲಕನ ಅಪಹರಣ ಪ್ರಕರಣ -48 ಗಂಟೆಯಲ್ಲಿ ಬಾಲಕನ ಪತ್ತೆಹಚ್ಚಿದ ಪೊಲೀಸರು

ಬೆಳ್ತಂಗಡಿ: ಸಿನಿಮಿಯ ರೀತಿಯಲ್ಲಿ ನಡೆದ ಉಜಿರೆಯಲ್ಲಿ ಬಾಲಕನ ಕಿಡ್ನಾಪ್ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ಅಪಹರಣ ನಡೆದ 48 ಗಂಟೆಗಳಲ್ಲಿ ಪೊಲೀಸರು ಮಗುವನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರದಲ್ಲಿ ಮಗುವನ್ನು ಪತ್ತೆ ಹಚ್ಚಿ 6 ಜನ ಅಪಹರಣಕಾರರನ್ನು ಬಂಧಿಸಿರುವ ಪೊಲೀಸರು, ಅಪಹರಣವಾದ 48 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ. ಉಜಿರೆ ರಥಬೀದಿಯ ಬಿಜೋಯ್ ಅವರ ಮಗ ಅನುಭವ್ (8) ಮನೆಯಂಗಳದಲ್ಲಿ ಆಡುತ್ತಿದ್ದಾಗಲೇ ಎರಡು ದಿನಗಳ ಹಿಂದೆ ಅಪಹರಣಕಾರರು ಅಪಹರಿಸಿದ್ದರು. ಉಭಯ ಜಿಲ್ಲೆಗಳಲ್ಲಿ ಈ ಪ್ರಕರಣ ಸಾಕಷ್ಟು ಆತಂಕ ಸೃಷ್ಟಿಸಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದರು. ಈ ನಡುವೆ ಅಪಹರಣಕಾರರು ಬಾಲಕನ ತಂದೆಗೆ ವಾಟ್ಸಾಪ್ ಮೂಲಕ 60 ಬಿಟ್ ಕಾಯಿನ್ ಗೆ ಬೇಡಿಕೆ ಇಟ್ಟಿದ್ದರು. 60 ಬಿಟ್ ಕಾಯಿನ್ ಭಾರತೀಯ ರೂಪಾಯಿ ಮೌಲ್ಯ ಪ್ರಕಾರ ಬರೋಬ್ಬರಿ 10 ಕೋಟಿಗೂ ಅಧಿಕ ಮೌಲ್ಯ ಹೊಂದಿದೆ.

ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ನೇತೃತ್ವದ ನಡೆದ ಕಾರ್ಯಾಚರಣೆ ಕೊಲಾರದ ಮಾಸ್ತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೋಲಾರದ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಹರಣಕಾರರನ್ನು ಮಗುವಿನೊಂದಿಗೆ ವಿಶೇಷ ತಂಡ ಪೊಲೀಸರು ಶನಿವಾರ ಬೆಳಗ್ಗೆ 5 ರ ಹೊತ್ತಿಗೆ ಪತ್ತೆ ಹಚ್ಚಿದರು. ಕೂಡಲೇ ಅಪಹರಣಕಾರರನ್ನು ಕೋಲಾರ ಪೊಲೀಸ್ ಠಾಣೆಗೆ ಕರೆತರಲಾಯಿತು.
ಇಂದು ಆರೋಪಿಗಳನ್ನು ಬೆಳಿಗ್ಗೆ 11 ಗಂಟೆಗೆ ಕೋಲಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.