FILM
ದುಬೈನಲ್ಲಿ ಗೋಲ್ಡನ್ ವೀಸಾ ಪಡೆದ ಕನ್ನಡದ ಮೊದಲ ನಟ ಕಿಚ್ಚ ಸುದೀಪ್!
ಬೆಂಗಳೂರು, ಸೆಪ್ಟೆಂಬರ್ 13: ಕಿಚ್ಚ ಸುದೀಪ್ ಅವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೋಲ್ಡನ್ ವೀಸಾ ದೊರಕಿದೆ. ಈ ಮೂಲಕ ಬಾಲಿವುಡ್ ತಾರೆಯರಾದ ಶಾರುಖ್ ಖಾನ್, ರಣವೀರ್ ಸಿಂಗ್ ಮತ್ತು ಸಂಜಯ್ ದತ್ ಸಾಲಿಗೆ ಸುದೀಪ್ ಸಹ ಸೇರಿದ್ದಾರೆ.
ಗೋಲ್ಡನ್ ವೀಸಾ ಪಡೆದ ಕನ್ನಡದ ಮೊದಲ ನಟ ಎಂಬ ಕೀರ್ತಿಗೆ ಸುದೀಪ್ ಪಾತ್ರರಾಗಿದ್ದಾರೆ. ಇದು 10 ವರ್ಷಗಳ ದೀರ್ಘಾವಧಿಯ ಗೋಲ್ಡನ್ ವೀಸಾ ಆಗಿದ್ದು, ಸುದೀಪ್ ಅವರು ದುಬೈ ಮತ್ತು ಯುಎಇಯ ಇತರ ಆರು ಎಮಿರೇಟ್‌ಗಳಿಗೆ ಅವರು ಬಯಸಿದಾಗ ಮತ್ತು ಭೇಟಿ ನೀಡಲು ಅನುವು ಮಾಡಿಕೊಡುತ್ತದೆ. ಯುಎಇಯ ಆರ್ಥಿಕತೆಗೆ ಕೊಡುಗೆ ನೀಡಬಹುದಾದ ಪ್ರಸಿದ್ಧ ವ್ಯಕ್ತಿಗಳು, ಉದ್ಯಮಿಗಳು ಮತ್ತು ಇತರ ವರ್ಗದ ವಿದೇಶಿ ನಾಗರಿಕರಿಗೆ ಗೋಲ್ಡನ್ ವೀಸಾವನ್ನು ಒದಗಿಸಲಾಗುತ್ತದೆ.
2019 ರಿಂದ ವಿದೇಶಿಯರಿಗೆ ಗೋಲ್ಡನ್ ವೀಸಾವನ್ನು ಯುಎಇ ಸರ್ಕಾರ ನೀಡುತ್ತಾ ಬಂದಿದೆ. ಇದರಿಂದ ವಿದೇಶಿಯರು ಯುಎಇನಲ್ಲಿ ಯಾವುದೇ ಅನುಮತಿ ಇಲ್ಲದೆ ವಿದ್ಯಾಭ್ಯಾಸ, ಕೆಲಸ, ಉದ್ಯಮ ನಡೆಸಬಹುದಾಗಿದೆ. ಗೋಲ್ಡನ್ ವೀಸಾದಿಂದ ವಿದೇಶಿ ಹೂಡಿಕೆದಾರರು ಮತ್ತು ಉದ್ಯಮಿಗಳು ಯುಎಇನಲ್ಲಿ ಸಂಪೂರ್ಣ ಮಾಲೀಕತ್ವದಲ್ಲಿ ಉದ್ಯಮ ನಡೆಸಬಹುದಾಗಿದೆ.
5 ಅಥವಾ 10 ವರ್ಷಗಳ ಅವಧಿಗೆ ಗೋಲ್ಡನ್ ವೀಸಾ ನೀಡುತ್ತಾರೆ. ಆ ಬಳಿಕ ಅದನ್ನು ನವೀಕರಿಸಿಕೊಳ್ಳಬಹುದು.ಯುಎಇ ಗೋಲ್ಡನ್ ವೀಸಾ ಹೊಂದಿರುವ ಇತರ ಭಾರತೀಯ ಸೆಲೆಬ್ರಿಟಿಗಳಲ್ಲಿ ಮೋಹನ್ ಲಾಲ್, ಮಮ್ಮುಟ್ಟಿ, ಸುನಿಲ್ ಶೆಟ್ಟಿ ಮತ್ತು ಸೋನು ನಿಗಮ್ ಸೇರಿದ್ದಾರೆ. ಕೇವಲ ಭಾರತೀಯರಿಗೆ ಮಾತ್ರವಲ್ಲದೆ ವಿಶ್ವದಾದ್ಯಂತ 40 ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ ಯುಎಇ ಗೋಲ್ಡನ್ ವೀಸಾ ನೀಡಿದೆ.