LATEST NEWS
ಶವಾಗಾರದಲ್ಲಿ ಪೊಲೀಸ್ ನಿರ್ಬಂಧ ಉಲ್ಲಂಘಿಸಿ ನೇರ ಪ್ರಸಾರಕ್ಕೆ ಪ್ರಯತ್ನಿಸಿದ ಕೇರಳದ ಪತ್ರಕರ್ತರ ಬಂಧನ
ಶವಾಗಾರದಲ್ಲಿ ಪೊಲೀಸ್ ನಿರ್ಬಂಧ ಉಲ್ಲಂಘಿಸಿ ನೇರ ಪ್ರಸಾರಕ್ಕೆ ಪ್ರಯತ್ನಿಸಿದ ಕೇರಳದ ಪತ್ರಕರ್ತರ ಬಂಧನ
ಮಂಗಳೂರು ಡಿಸೆಂಬರ್ 20: ಗಲಭೆ ಬುಗಿಲೆದ್ದ ಮಂಗಳೂರು ಬಂದರು ಪ್ರದೇಶ ಈಗ ಶಾಂತವಾಗಿದೆ. ನಿನ್ನೆ ಮಧ್ಯಾಹ್ನ ಹಿಂಸಾಚಾರ ಬುಗಿಲೆದ್ದ ಹಿನ್ನಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸೆಂಬರ್ 22 ರವರೆಗೆ ಕರ್ಪ್ಯೂ ಜಾರಿ ಮಾಡಲಾಗಿದೆ.
ನಗರದ ಎಲ್ಲಾ ಆಯಕಟ್ಟಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದ್ದು, ನಗರದಾದ್ಯಂತ ಪೊಲೀಸ್ ಟೀಮ್ ಗಳು ಗಸ್ತು ತಿರುಗುತ್ತಿದೆ. ಇಂದು ಕೂಡ ಹಿಂಸಾಚಾರ ನಡೆಯುವ ಆತಂಕದ ಹಿನ್ನಲೆಯಲ್ಲಿ ಹೆಚ್ಚಿನ ಪೊಲೀಸ್ ಪಡೆಗಳನ್ನು ಜಿಲ್ಲೆಗೆ ಕರೆಸಿಕೊಳ್ಳಲಾಗುತ್ತಿದೆ.
ಇತರ ಜಿಲ್ಲೆಗಳಿಂದ ಕೆಎಸ್ ಆರ್ ಪಿ ತುಕಡಿಗಳನ್ನು ಮಂಗಳೂರು ಹಾಗೂ ದಕ್ಷಿಣಕನ್ನಡ ಜಿಲ್ಲೆಗೆ ಕರೆಸಿಕೊಳ್ಳಲಾಗಿದ್ದು, ಕರಾವಳಿ ಜಿಲ್ಲೆಯಲ್ಲಿ ಪೊಲೀಸ್ ಬೂಟಿನ ಸದ್ದು ಕೇಳಿ ಬರುತ್ತಿದೆ. ಕರ್ಪ್ಯೂ ಹಿನ್ನಲೆಯಲ್ಲಿ ನಗರದಲ್ಲಿ ಜನಜೀವನ ಸ್ತಬ್ದವಾಗಿದ್ದು, ದಿನನಿತ್ಯದ ಕಾರ್ಯಗಳಿಗೆ ತೆರಳಲು ಜನರಿಗೆ ಸಮಸ್ಯೆ ಉಂಟಾಗಿದೆ.
ಮನೆಯಿಂದ ಹೊರಬರದಂತೆ ಪೊಲೀಸರು ನಿರ್ಬಂದ ಹೇರಿದ್ದು, ಪ್ರತಿ ರಸ್ತೆಗಳಲ್ಲಿ ಪೊಲೀಸ್ ವಾಹನ ಎನೌನ್ಸ್ ಮೆಂಟ್ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ಈ ನಡುವೆ ಮುಂದಿನ 48 ಗಂಟೆಗಳ ಕಾಲ ಮಂಗಳೂರು ಸೇರಿದಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ನಿನ್ನೆ ಪೊಲೀಸರ ಹಾಗೂ ಕಿಡಿಗೇಡಿಗಳ ನಡುವೆ ನಡೆದ ಘರ್ಷಣೆಯಲ್ಲಿ ಮೃತಪಟ್ಟ ಇಬ್ಬರ ಮೃತ ದೇಹವನ್ನು ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಶವಾಗಾರದ ಸುತ್ತ ಹೆಚ್ಚಿನ ಪೊಲೀಸ್ ಬಂದೋಬಸ್ ನಡೆಸಲಾಗಿದ್ದು, ಮಾಧ್ಯಮಗಳಿಗೆ ಒಳ ಪ್ರವೇಶಿಸದಂತೆ ನಿರ್ಬಂಧ ಹೇಳಲಾಗಿದೆ.
ಈ ನಡುವೆ ನಿರ್ಬಂಧ ಉಲ್ಲಂಘಿಸಿ ಶವಾಗಾರಕ್ಕೆ ತೆರಳಲು ಯತ್ನಿಸಿದ್ದ ಕೇರಳದ ಮೂರು ವಾಹಿನಿಗಳ ಪತ್ರಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶವಾಗಾರದ ಎದುರು ಬಂದು ನೇರ ಪ್ರಸಾರಕ್ಕೆ ಯತ್ನಿಸಿದ ಪತ್ರಕರ್ತರನ್ನ ಮಂಗಳೂರು ಪೊಲೀಸ್ ಕಮಿಷನರ್ ಡಾ. ಪಿ.ಎಸ್ ಹರ್ಷ ತಡೆದು ಅವರನ್ನು ವಶಕ್ಕೆ ಪಡೆಯುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.