Connect with us

    KARNATAKA

    ನಕಲಿ ಪಾಸ್‌ಪೋರ್ಟ್ ವೀಸಾ ಜಾಲ ಭೇದಿಸಿದ ಕೇರಳ ಪೊಲೀಸರು, ಮೂವರ ಬಂಧನ..!

    ಕಾಸರಗೋಡು : ನಕಲಿ ವೀಸಾ ದಂಧೆಯಲ್ಲಿ ತೊಡಗಿಕೊಂಡಿದ್ದ ಭಾರಿ ಜಾಲವೊಂದನ್ನು ಕೇರಳದ ಬೇಡಕಂ ಪೊಲೀಸರು ಭೇದಿಸಿದ್ದು ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.

    ಬಂಧಿತರಿಂದ 37 ನಕಲಿ ಸೀಲುಗಳು, ಬ್ಯಾಂಕ್‌ಗಳು, ಕಾಲೇಜುಗಳು ಮತ್ತು ವೈದ್ಯರ ಲೆಟರ್‌ಹೆಡ್‌, ಲ್ಯಾಪ್ ಟಾಪ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ದಕ್ಷಿಣ ಕೊರಿಯಾದ ಕೆಐಎ ಉದ್ಯೋಗಿಯೂ ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಬಂಧಿತರಿಂದ ಮೂರು ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ತ್ರಿಕರಿಪುರ ಗ್ರಾಮ ಪಂಚಾಯತ್‌ನ ಉಡುಂಬುಂತಲದ ಎಂ ಎ ಅಹಮದ್ ಅಬ್ರಾರ್ (26) ಮತ್ತು ಎಂ ಎ ಸಾಬಿತ್ (25) ಮತ್ತು ಕಾಞಂಗಾಡು ಪುರಸಭೆಯ ಪಡನ್ನಕ್ಕಾಡ್‌ನ ಮುಹಮ್ಮದ್ ಸಫ್ವಾನ್ (28) ಬಂಧಿತ ಆರೋಪಿಗಳಾಗಿದ್ದಾರೆ. ನಕಲಿ ರಬ್ಬರ್ ಸೀಲ್‌ಗಳಲ್ಲಿ ವೈದ್ಯರು ಮತ್ತು ಬ್ಯಾಂಕ್ ವ್ಯವಸ್ಥಾಪಕರ ರಬ್ಬರ್ ಸ್ಟ್ಯಾಂಪ್‌ಗಳು ಸೇರಿವೆ. ವಶಪಡಿಸಿಕೊಂಡ ಲೆಟರ್ ಪ್ಯಾಡ್‌ಗಳಲ್ಲಿ ಪಟಣ್ಣ ಶರಾಫ್ ಕಾಲೇಜು, ಚಟ್ಟಂಚಾಲ್ ಎಂಐಸಿ ಕಾಲೇಜು ಮತ್ತು ಎಂಇಎಸ್ ಕಾಲೇಜುಗಳು ಸೇರಿವೆ.

    ಬಂಟತುಕ್ಕ ಕಂಡಿತೋಟದಲ್ಲಿ ಗುರುವಾರ ರಾತ್ರಿ ಬೇಡಕಂ ಎಸ್ ಐ ಎಂ ಗಂಗಾಧರನ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ನಕಲಿ ದಾಖಲೆ, ರಬ್ಬರ್ ಸೀಲು, ಲೆಟರ್ ಪ್ಯಾಡ್ ಗಳೊಂದಿಗೆ ಈ ಮೂವರ ತಂಡ ಸಿಕ್ಕಿಬಿದ್ದಿದೆ. ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಅಲುವಾ, ಅಂಗಮಾಲಿ ಫೆಡರಲ್ ಬ್ಯಾಂಕ್, ತ್ರಿಕರಿಪುರ ಸೌತ್ ಇಂಡಿಯನ್ ಬ್ಯಾಂಕ್ ಮೊದಲಾದ ಬ್ಯಾಂಕ್‌ಗಳ ವ್ಯವಸ್ಥಾಪಕರ ಹೆಸರಿನಲ್ಲಿರುವ ನಕಲಿ ರಬ್ಬರ್ ಸ್ಟ್ಯಾಂಪ್‌ ಗಳು ಸಿಕ್ಕಿವೆ.

    ಜೊತೆಗೆ ಬೆಂಗಳೂರು ಸೂಪರ್ ಸ್ಪೆಷಾಲಿಟಿ ಕೇಂದ್ರದ ಉದ್ಯೋಗ ದೃಢೀಕರಣ ಪತ್ರ ಹಾಗೂ ಎಂಇಎಸ್ ಕಾಲೇಜಿನ ನಿರಪೇಕ್ಷಣಾ ಪತ್ರವನ್ನೂ ವಶಪಡಿಸಿಕೊಳ್ಳಲಾಗಿದ್ದು ಇವು ನಕಲಿ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳು ಕೊರಿಯಾಕ್ಕೆ ನಕಲಿ ವೀಸಾ ಸಿದ್ಧಪಡಿಸುವ ದಂಧೆಯಲ್ಲಿ ತೊಡಗಿಕೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *