LATEST NEWS
ಕೇರಳದಲ್ಲಿ ನಡೆದ ಅಘಾತಕಾರಿ ಕೃತ್ಯ – 18 ವರ್ಷದ ಯುವತಿ ಮೇಲೆ 62 ಮಂದಿಯಿಂದ 5 ವರ್ಷ ನಿರಂತರ ಅತ್ಯಾಚಾರ
ಪತ್ತನಂತಿಟ್ಟ ಜನವರಿ 11: ಕೇರಳದಲ್ಲಿ ಅಘಾತಕಾರಿ ಘಟನೆ ನಡೆದಿದ್ದು. ಕ್ರಿಡಾಪಟುವಾಗಿರುವ 18 ವರ್ಷದ ಯುವತಿಯ ಮೇಲೆ 5 ವರ್ಷಗಳಿಂದ 60ಕ್ಕೂ ಅಧಿಕ ಮಂದಿ ನಿರಂತರ ಅತ್ಯಾಚಾರ ನಡೆಸಿದ್ದು, ಪ್ರಕರಣ ದಾಖಲಾದ ಬೆನ್ನಲ್ಲೇ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವರದಿಗಳ ಪ್ರಕಾರ, 2019 ರಲ್ಲಿ ಹುಡುಗಿ 13 ವರ್ಷದವಳಿದ್ದಾಗ ಮೊದಲ ಬಾರಿಗೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಳು. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೊದಲು ಆಕೆಯ ಪ್ರಿಯಕರ ಆಕೆಯನ್ನು ಅತ್ಯಾಚಾರ ಮಾಡಿದ್ದಾನೆ. ಬಳಿಕ ಅದರ ವಿಡಿಯೋ ಮಾಡಿ ಅದನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ. ಅದರ ಬಳಿಕ ಆತನ ಸ್ನೇಹಿತರೂ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ನಿರಂತರ ದೌರ್ಜನ್ಯದ ಪರಿಣಾಮ ಬಾಲಕಿಯ ಶೈಕ್ಷಣಿಕ ಸಾಧನೆಯಲ್ಲಿಯೂ ಕುಸಿತ ಕಂಡುಬಂದಿತ್ತು. ಕೌನ್ಸೆಲಿಂಗ್ ಅವಧಿಯಲ್ಲಿ ಮಹಿಳಾ ಸಬಲೀಕರಣ ಸಮೂಹದ ಎದುರು ಈ ವಿಷಯವನ್ನು ಮೊದಲು ಬಹಿರಂಗಪಡಿಸಿದ್ದಾರೆ. ‘ತನಿಖೆ ಮುಂದುವರೆದಂತೆ ಇನ್ನಷ್ಟು ಆರೋಪಿಗಳನ್ನು ಗುರುತಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಮಹಿಳಾ ಸಬಲೀಕರಣ ಸಮೂಹ ಸಿಡಬ್ಲ್ಯೂಸಿಗೆ ಮಾಹಿತಿ ನೀಡಿತು. ಇದಾದ ನಂತರ, ಯುವತಿ ತನ್ನ ತಾಯಿಯೊಂದಿಗೆ ಇಡೀ ಘಟನೆಯನ್ನು ಸಿಡಬ್ಲ್ಯೂಸಿ ಸದಸ್ಯರಿಗೆ ವಿವರಿಸಿದ್ದಾರೆ.
ವರದಿಗಳ ಪ್ರಕಾರ, ಆಕೆ ಲೈಂಗಿಕ ಕಿರುಕುಳಕ್ಕೊಳಗಾದ ಅವಧಿಯಲ್ಲಿ, ಸಂತ್ರಸ್ತೆ ಫೋನ್ ಹೊಂದಿರಲಿಲ್ಲ. ಆದರೆ, ಹುಡುಗಿ ತನ್ನ ತಂದೆಯ ಫೋನ್ ಬಳಸುತ್ತಿದ್ದಳು. ಕೆಲ ದುಷ್ಕರ್ಮಿಗಳು ದೂರವಾಣಿ ಕರೆ ಮಾಡುತ್ತಿದ್ದರು. ಅವರಲ್ಲಿ 32 ಮಂದಿಯ ಹೆಸರುಗಳು ಫೋನ್‌ನಲ್ಲಿ ಸೇವ್ ಆಗಿರುವುದು ಕಂಡುಬಂದಿದೆ. ಅತ್ಯಾಚಾರಕ್ಕೊಳಗಾದ ಅವಧಿಯಲ್ಲಿ ಆಕೆಯ ನಗ್ನ ಚಿತ್ರಗಳು ಸೋರಿಕೆಯಾಗಿದ್ದವು. ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ಆ ಚಿತ್ರಗಳನ್ನು ನೋಡಿದ ಕೆಲವು ಆರೋಪಿಗಳು ಅವಳೊಂದಿಗೆ ಸ್ನೇಹಿತರಂತೆ ನಟಿಸಿ ಪತ್ತನಂತಿಟ್ಟದ ಚುಟ್ಟಿಪ್ಪಾರ ಎಂಬ ಸ್ಥಳದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಶಾಲೆಯಲ್ಲಿ ಮತ್ತು ಅವರ ಮನೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ವಿವರವಾದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ಮುಖ್ಯಸ್ಥರು ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಆರಂಭಿಕ ಹಂತದಲ್ಲಿ ಪತ್ತನಂತಿಟ್ಟ ಮತ್ತು ಎಲವುಂತಿಟ್ಟ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಮುಂದಿನ ದಿನಗಳಲ್ಲಿ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಕರಣಗಳು ದಾಖಲಾಗಲಿವೆ.
ಇತ್ತೀಚಿನ ಮಾಹಿತಿಗಳ ಪ್ರಕಾರ ಪೊಲೀಸರು ಇನ್ನೂ ಹತ್ತು ಮಂದಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ . ಈ ಹಿಂದೆ ಐವರನ್ನು ವಶಕ್ಕೆ ಪಡೆಯಲಾಗಿತ್ತು. ವರದಿಗಳ ಪ್ರಕಾರ, ತನಿಖೆ ಮುಂದುವರೆದಂತೆ ಮತ್ತಷ್ಟು ಬಂಧನಗಳು ನಡೆಯಬಹುದು.