KARNATAKA
ಕೇರಳಕ್ಕೆ ಇಂದೇ ಮುಂಗಾರು ಪ್ರವೇಶ ಸಾಧ್ಯತೆ – ಹವಾಮಾನ ಇಲಾಖೆ
ಕೇರಳ ಮೇ 30: ಈಗಾಗಲೇ ಪೂರ್ವ ಮಾನ್ಸೂನ್ ಮಳೆಯಿಂದ ಕಂಗಾಲಾಗಿರುವ ಕೇರಳಕ್ಕೆ ಇಂದೇ ಮುಂಗಾರು ಮಳೆ ಪ್ರಾರಂಭವಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದ್ದು, ಇದರ ಜೊತೆಗೆ ಈಶಾನ್ಯ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ನೈರುತ್ಯ ಮುಂಗಾರು ಗುರುವಾರ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆ ಹವಾಮಾನ ಇಲಾಖೆ ಮೇ 31ರಂದು ಕೇರಳಕ್ಕೆ ಮುಂಗಾರು ಪ್ರವೇಶ ಮಾಡಲಿದೆ ಎಂದು ಹೇಳಿತ್ತು. ಆದರೆ ರಮೆಲ್ ಚಂಡ ಮಾರುತ ಮುಂಗಾರು ಮಳೆ ಮೇಲೆ ಪರಿಣಾಮ ಬೀರಿದೆ. ಒಂದು ದಿನ ಮುಂಚಿತವಾಗಿ ಇಂದಿನಿಂದಲೇ ಕೇರಳ ಕರಾವಳಿ ಮತ್ತು ಈಶಾನ್ಯದ ಕೆಲವು ಭಾಗಗಳಲ್ಲಿ ಮುಂಗಾರು ಪ್ರವೇಶಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಮೂಲಕ ಸಾಗಿದ ರೀಮಲ್ ಚಂಡಮಾರುತ ಮಾನ್ಸೂನ್ ಹರಿವನ್ನು ಬಂಗಾಳ ಕೊಲ್ಲಿಗೆ ಎಳೆದಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿಗಳು ಹೇಳಿದ್ದಾರೆ. ಇದರ ಪರಿಣಾಮ ಈಶಾನ್ಯ ರಾಜ್ಯಗಳಲ್ಲಿ ಮುಂಗಾರು 5 ದಿನ ಮುಂಚಿತವಾಗಿಯೇ ಪ್ರವೇಶ ಪಡೆಯಲಿದೆ ಎಂದು ಅವರು ಹೇಳಿದ್ದಾರೆ.
ಕೇರಳ ಕರಾವಳಿ ಸೇರಿದಂತೆ ಅರುಣಾಚಲ ಪ್ರದೇಶ, ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನಲ್ಲಿ ಮಳೆಯಾಗಲಿದೆ.