LATEST NEWS
ಶಬರಿಮಲೆಯಲ್ಲಿ ನಟ ದಿಲೀಪ್ ಗೆ ವಿಐಪಿ ದರ್ಶನ – ಅವರಿಗಿರುವ ಅರ್ಹತೆಗಳೇನು? ಎಂದು ಪ್ರಶ್ನಿಸಿದ ಕೇರಳ ಹೈಕೋರ್ಟ್
ಕೊಚ್ಚಿ ಡಿಸೆಂಬರ್ 06: ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ಆಗಮಿಸಿದ ಮಲೆಯಾಳಂ ನಟ ದಿಲೀಪ್ ಗೆ ವಿಐಪಿ ದರ್ಶನ ನೀಡಿದ ಪೊಲೀಸ್ ಇಲಾಖೆ ಹಾಗೂ ತಿರುವಾಂಕೂರ್ ದೇವಸ್ವಂ ಮಂಡಳಿಯನ್ನು ಕೇರಳ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ವಿಐಪಿ ದರ್ಶನ ಪಡೆಯಲು ಅವರಿಗೆ ಇರುವ ಅರ್ಹತೆ ಏನು ಎಂದು ಪ್ರಶ್ನಿಸಿದೆ.
ಶಬರಿಮಲೆ ವಿಚಾರದಲ್ಲಿ ಸಣ್ಣ ಲೋಪವಾದರೂ ಕೇರಳ ಹೈಕೋರ್ಟ್ ಮಧ್ಯಪ್ರವೇಶಿಸುತ್ತದೆ. ಹೀಗಾಗಿ ಸದ್ಯ ಶಬರಿಮಲೆ ಯಾತ್ರೆಯಲ್ಲಿ ಕೇರಳ ಸರಕಾರ ಯಾವುದೇ ಸಮಸ್ಯೆಯಾಗದಂತೆ ನಿರ್ವಹಿಸುತ್ತಿದೆ. ಆದರೂ ಮತ್ತೆ ಮತ್ತೆ ಕೇರಳ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಈ ಬಾರಿ ಡಿಸೆಂಬರ್ 5 ರಂದು ಮಲೆಯಾಳಂ ನ ನಟ ದಿಲೀಪ್ ಅವರಿಗೆ ವಿಐಪಿ ದರ್ಶನ ನೀಡಿದ ಕೇರಳ ಸರಕಾರದ ವಿರುದ್ದ ಹೈಕೋರ್ಟ್ ಗರಂ ಆಗಿದೆ.
ಡಿಸೆಂಬರ್ 5ರಂದು ದಿಲೀಪ್‌ಗೆ ವಿಐಪಿ ದರ್ಶನ ನೀಡಲು ಕಾರಣವೇನು ಹಾಗು ಇದಕ್ಕೆ ಸಂಬಂಧಿಸಿದಂತೆ ಆ ದಿನದ ಸಿಸಿಟಿವಿ ದೃಶ್ಯಾವಳಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾ. ಅನಿಲ್ ಕೆ. ನರೇಂದ್ರನ್ ಹಾಗೂ ನ್ಯಾ. ಮುರಳಿ ಎಸ್. ಕೃಷ್ಣ ಅವರನ್ನೊಳಗೊಂಡ ವಿಭಾಗೀಯ ಪೀಠವು ಮಂಡಳಿ ಹಾಗೂ ಪೊಲೀಸರಿಗೆ ನಿರ್ದೇಶಿಸಿತು.
‘ದೇವಾಲಯದ ಗರ್ಭಗುಡಿ ಎದುರು ಸೊಪಾನಂ ಬಳಿ ಮುಂದಿನ ಸಾಲಿನಲ್ಲಿ ದಿಲೀಪ್ ನಿಂತಿದ್ದಾರೆ. ಹರಿವರಾಸನಂ ಪೂರ್ಣಗೊಂಡು ಬಾಗಿಲು ಹಾಕುವವರೆಗೂ ನಿಲ್ಲಲು ನಟನಿಗೆ ಅವಕಾಶ ನೀಡಿದ್ದು ಹೇಗೆ? ಈ ವಿಶೇಷ ಸವಲತ್ತು ಪಡೆಯಲು ಅವರಿಗಿರುವ ಅರ್ಹತೆಗಳೇನು? ದೇವಾಲಯದಲ್ಲಿ ಏನು ನಡೆಯುತ್ತಿದೆ? ವಯಸ್ಸಾದವರು, ಮಕ್ಕಳನ್ನು ಒಳಗೊಂಡು ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿರುವಾಗ ಒಬ್ಬ ನಟನಿಗೆ ನೀಡಿದ ಈ ವಿಶೇಷ ಆತಿಥ್ಯ ಸಾಮಾನ್ಯ ಭಕ್ತರ ಹಕ್ಕುಗಳನ್ನು ಕಸಿದುಕೊಂಡಂತಾಗಲಿಲ್ಲವೇ’ ಎಂದು ಪೀಠ ಪ್ರಶ್ನಿಸಿತು.