National
ಕೇರಳದ 30 ಕೆ.ಜಿ ಚಿನ್ನ ಅಕ್ರಮ ಸಾಗಣೆ ತನಿಖೆಯ ಹೊಣೆ ಎನ್‌ಐಎಗೆ
ಕೇರಳ : ಕೇರಳ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಸಿಕ್ಕ 30 ಕೆ.ಜಿ. ತೂಕದ ಚಿನ್ನದ ಪ್ರಕರಣ ಕೇರಳ ಮುಖ್ಯಮಂತ್ರಿ ಕುರ್ಚಿಗೆ ಕಂಟಕ ತರುವಂತ ಪರಿಸ್ಥಿತಿ ನಿರ್ಮಾಣ ಮಾಡಿದೆ. ಈ ನಡುವೆ ಕೇಂದ್ರ ಗೃಹ ಸಚಿವಾಲಯ ಈ ಸ್ಮಗ್ಲಿಂಗ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ)ಕ್ಕೆ ವಹಿಸಿದೆ.
ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿರುವ ಚಿನ್ನದ ಹಿಂದೆ ಮುಖ್ಯಮಂತ್ರಿ ಕಚೇರಿಯ ಕೈವಾಡವೂ ಇದೆ. ಸಿಎಂ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು ಎಂದು ಕೇರಳದಲ್ಲಿ ಪ್ರತಿಪಕ್ಷಗಳು ಆಗ್ರಹ ಮಾಡಿದ್ದವು. ಅದಾದ ಬಳಿಕ ಪಿಣರಾಯಿ ವಿಜಯನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಗಳಿಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದರು. ಸಿಎಂ ಪತ್ರಕ್ಕೆ ಮಾನ್ಯತೆ ನೀಡಿ ಕೇರಳ ಸ್ಮಗ್ಲಿಂಗ್ ತನಿಖೆಯನ್ನು ಎನ್‌ಐಎಗೆ ವಹಿಸಲಾಗಿದೆ. ರಾಷ್ಟ್ರದ ಭದ್ರತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಇನ್ನು ಈ ಪ್ರಕರಣ ಬೆಳಕಿಗೆ ಬಂದಾಗಿನಿಂದ ತಾನು ನಾಪತ್ತೆಯಾಗಿರುವ ಪ್ರಕರಣದ ಪ್ರಮುಖ ರೂವಾರಿ ಎಂದು ಹೇಳಲಾಗುವ ಚಿನ್ನದ ರಾಣಿ ಸ್ವಪ್ನಾ ಸುರೇಶ್ ಅಜ್ಞಾತ ಸ್ಥಳದಲ್ಲಿ ಕೇರಳ ಮಾಧ್ಯಮಗಳಿಗೆ ಆಡಿಯೋ ಒಂದನ್ನು ಕಳುಹಿಸಿದ್ದಾಳೆ. ‘‘ನನ್ನ ಜೀವಕ್ಕೆ ಬೆದರಿಕೆ ಇರುವುದರಿಂದ ನಾನು ಅಜ್ಞಾತ ಸ್ಥಳದಲ್ಲಿದ್ದೇನೆ. ವಿರೋಧ ಪಕ್ಷಗಳು ಮತ್ತು ಮಾಧ್ಯಮದವರಲ್ಲಿ ನನ್ನ ವಿನಂತಿ ಇಷ್ಟೇ. ವಿನಾಕಾರಣ ಈ ಪ್ರಕರಣದಲ್ಲಿ ನನ್ನ ಹೆಸರು ಎಳೆದುತರಬೇಡಿ. ನನ್ನ ಗೌರವಕ್ಕೆ ಧಕ್ಕೆ ಉಂಟು ಮಾಡಬೇಡಿ. ನಾನು ಎಲ್ಲ ರೀತಿಯ ತನಿಖೆಗೂ ಸಿದ್ಧಳಾಗಿದ್ದೇನೆ. ಯಾವ ಸಚಿವರೂ ನನ್ನ ಆಪ್ತರಲ್ಲ. ನಾನೇ ಅವರನ್ನು ಯುಎಇ ಕಾನ್ಸುಲೇಟ್ ಕಚೇರಿಯ ಕಾರ‌್ಯಕ್ರಮಗಳಿಗೆ ಆಹ್ವಾನಿಸಿದ್ದಾಗ ಅವರ ಜತೆ ಮಾತನಾಡಿದ್ದಿದೆ’’ ಎಂದು ವಿವರಿಸಿದ್ದಾಳೆ.
ಅಲ್ಲದೆ ‘‘ಮುಂದಿನ ವರ್ಷ ಕೇರಳದಲ್ಲಿ ಚುನಾವಣೆ ನಡೆಯಲಿರುವ ಕಾರಣ ಸರ್ಕಾರದ ವರ್ಚಸ್ಸು ಕುಂದಿಸಲು ಈ ಹಗರಣ ಸೃಷ್ಟಿಸಲಾಗಿದೆ. ಇದರಲ್ಲಿ ನನ್ನನ್ನು ಬಲಿಪಶು ಮಾಡಿದ್ದಾರೆ. ರಾಜತಾಂತ್ರಿಕ ಬ್ಯಾಗೇಜ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಿಂದ 30 ಕಿಲೋ ಚಿನ್ನ ಕೇರಳಕ್ಕೆ ಕಳ್ಳಸಾಗಾಣಿಕೆಯಾಗಿದ್ದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಯುಎಇ ಕಾನ್ಸುಲೇಟ್ ಕಚೇರಿಯವರು ಕೇಳಿಕೊಂಡಿದ್ದರಿಂದ ನಾನು ಕಸ್ಟಮ್ಸ್‌ಗೆ ಫೋನ್ ಮಾಡಿ ಚಿನ್ನವನ್ನು ಬಿಟ್ಟುಕಳಿಸುವಂತೆ ತಿಳಿಸಿದೆ. ಇಷ್ಟನ್ನು ಹೊರತುಪಡಿಸಿ ಇದರಲ್ಲಿ ನನ್ನ ಪಾತ್ರ ಬೇರೇನೂ ಇಲ್ಲ’’ ಎಂದು ಸುದ್ದಿ ವಾಹಿನಿಯೊಂದಕ್ಕೆ ಕಳಿಸಿರುವ ಆಡಿಯೋದಲ್ಲಿ ಸ್ವಪ್ನಾ ಸುರೇಶ್ ಹೇಳಿದ್ದಾಳೆ.