LATEST NEWS
ಉಪ್ಪಿಟ್ಟು ಬದಲು ಚಿಕನ್ ಬಿರಿಯಾನಿ ಕೇಳಿದ ಪುಟ್ಟ ಬಾಲಕ – ಓಕೆ ಎಂದ ಕೇರಳ ಸರಕಾರ
ಕೇರಳ ಫೆಬ್ರವರಿ 04: ಅಂಗನವಾಡಿ ಬಾಲಕನೊಬ್ಬ ತನಗೆ ಉಪ್ಪಿಟ್ಟಿನ ಬದಲು ಚಿಕನ್ ಫ್ರೈ ಅಥವಾ ಚಿಕನ್ ಬಿರಿಯಾನಿ ಬೇಕೆಂದು ಕೇಳಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಾಲಕನ ಮಾತನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ವೀಣಾ ಜಾರ್ಜ್ ಮಗುವಿನ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ವೀಣಾ ಜಾರ್ಜ್ ಶಂಕು ಎಂಬ ಮಗು ತುಂಬಾ ಮುಗ್ಧವಾಗಿ ಒಂದು ಮನವಿಯನ್ನು ಮಾಡಿಕೊಂಡಿದೆ. ಇದನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸಲಿದೆ ಎಂದು ಹೇಳಿದ್ದಾರೆ. ಮಗು ಶಂಕುವಿಗೆ, ಅವರ ತಾಯಿಗೆ ಹಾಗೂ ಅಂಗನವಾಡಿ ಸಿಬ್ಬಂದಿಗೆ ಸಂದೇಶ ನೀಡಿರುವ ಸಚಿವೆ, ಅಂಗನವಾಡಿಗೆ ನೀಡಲಾಗುವ ಆಹಾರದ ಮೆನುವನ್ನು ಪರಿಶೀಲಿಸಲಾಗುವುದು, ಶಂಕುವಿನ ಮನವಿಯನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ. ಈಗಾಗಲೇ ನಾವು ಅಂಗನವಾಡಿಗೆ ಅನೇಕರ ರೀತಿಯ ಪೌಷ್ಠಿಕಾಂಶ ನೀಡುವ ಆಹಾರವನ್ನು ನೀಡುತ್ತಿದ್ದೇವೆ. ಈಗ ಮಗು ಈ ಮನವಿಯನ್ನು ಮಾಡಿಕೊಂಡಿದ್ದು ಇದನ್ನು ಕೂಡ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ವಿಡಿಯೋದಲ್ಲಿ ಮಗುವೊಂದು ತಲೆಯ ಮೇಲೋಂದು ಕ್ಯಾಪ್ ಹಾಕಿಕೊಂಡು ತನ್ನ ತಾಯಿಯ ಹತ್ತಿರ, ತೊದಲು ನುಡಿಯಿಂದ ನನಗೆ ಉಪ್ಪಿಟ್ಟಿನ ಬದಲು ಬಿರಿಯಾನಿ ಮತ್ತು ಪೊರಚಿ ಕೊಚಿಬೇಕು ಎಂದು ಮುಗ್ಧವಾಗಿ ಹೇಳಿಕೊಂಡಿದೆ. ಇದನ್ನು ವಿಡಿಯೋ ಮಾಡಿಕೊಂಡಿರುವ ತಾಯಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಸಖತ್ ವೈರಲ್ ಆಗಿದೆ. ಸರ್ಕಾರದ ಗಮನಕ್ಕೆ ತಲುಪುವವರೆಗೆ ಸುದ್ದಿಯಾಗಿದೆ.