DAKSHINA KANNADA
ಕಾವ್ಯ ಸಂಶಯಸ್ಪದ ಸಾವು, ಸಮಗ್ರ ತನಿಖೆಗೆ ಎಸ್ ಡಿಪಿ ಐ ಆಗ್ರಹ.
ಮಂಗಳೂರು, ಜುಲೈ 28 : ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯಾಗಿದ್ದ ಕಾವ್ಯ ಜುಲೈ 20 ರಂದು ಹಾಸ್ಟೆಲ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು ಹಲವು ಅನುಮಾನಕ್ಕೆ ಎಡೆಮಾಡಿದೆ. ಇದರ ಸತ್ಯಾಸತ್ಯತೆ ಬಯಲಾಗಬೇಕಾದರೆ ರಾಜ್ಯ ಸರಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಎಸ್ ಡಿ ಪಿ ಐ ಸರ್ಕಾರವನ್ನು ಆಗ್ರಹಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ವಿದ್ಯಾರ್ಥಿನಿಯ ಈ ನಿಗೂಢ ಸಾವು ಸಾರ್ವಜನಿಕ ವಲಯದಲ್ಲಿ ಮತ್ತು ವಿದ್ಯಾರ್ಥಿನಿಯ ಪೋಷಕರಲ್ಲಿ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂಬ ಬಲವಾದ ಸಂಶಯಗಳು, ಆರೋಪಗಳು ಕೇಳಿಬರುತ್ತಿದೆ.ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ವರ್ಷವು ಇಂತಹ ಘಟನೆಗಳು ಮರುಕಳಿಸುತ್ತಿದೆ.ಆದರೆ ಇದರ ಹಿಂದಿರುವ ನೈಜತೆಯನ್ನು ಬಯಲಿಗೆಳೆಯದೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮರೆಮಾಚುತ್ತಿರುವ ವಿಚಾರ ಚರ್ಚೆಯಾಗುತ್ತಿದೆ ಎಂದು ಹೇಳಿಕೆ ನೀಡಿರುವ ಅವರು ಕಾವ್ಯ ನಿಗೂಢ ಸಾವಿನ ಬಗ್ಗೆ ಧ್ವನಿಯೆತ್ತದೆ ಮೌನ ವಹಿಸಿದರೆ ಈ ಘಟನೆಯು ನ್ಯಾಯ ಮರೀಚಿಕೆಯ ಸಾಲಿನಲ್ಲಿ ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ. ಕಾವ್ಯಳ ನಿಗೂಢ ಸಾವು ಮೇಲ್ನೋಟಕ್ಕೆ ಕೊಲೆ ಎಂದು ಕಾಣುತ್ತಿದ್ದರು ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸದೆ ಘಟನೆಯನ್ನು ಗೌಪ್ಯವಾಗಿ ಮುಚ್ಚುವ ಕೆಲಸದಲ್ಲಿ ತಲ್ಲಿನ ಆಗಿರುವುದು ಅಪಾಯಕಾರಿ ಬೆಳವಣಿಗೆ ಆಗಿದೆ. ಆದ್ದರಿಂದ ಸಮಗ್ರ ತನಿಖೆಯ ಜೊತೆಗೆ ಕಾವ್ಯಳ ಕುಟುಂಬಕ್ಕೆ ಸರಕಾರವು ಕೂಡಲೇ ಪರಿಹಾರ ಧನ ವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಕಾವ್ಯಳ ಕುಟುಂಬಕ್ಕೆ ನ್ಯಾಯ ಸಿಗದೆ ಇದ್ದಲ್ಲಿ ಜಿಲ್ಲೆಯ ಎಲ್ಲಾ ಪ್ರಜ್ಞಾವಂತ ನಾಗರಿಕರು ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಇಕ್ಬಾಲ್ ಬೆಳ್ಳಾರೆ ಆಗ್ರಹಿಸಿದ್ದಾರೆ.