LATEST NEWS
ಕಾಶೀಮಠಾಧೀಶರಿಂದ ಅಯೋಧ್ಯೆಯ ಶ್ರೀ ರಾಮ ಮಂದಿರದ ರಜತ ದ್ವಾರಕ್ಕೆ ಬೆಳ್ಳಿ ಸಮರ್ಪಣೆ

ಮಂಗಳೂರು ಜನವರಿ 09: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀ ರಾಮ ಮಂದಿರದ ಬೃಹತ್ ರಜತ ದ್ವಾರಕ್ಕೆ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಭಕ್ತರು ನೀಡಿದ ಅಂದಾಜು 170 ಕೆಜಿ ಬೆಳ್ಳಿಯನ್ನು ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಸೋಮವಾರ ಜನವರಿ 9 ರಂದು ಸಮರ್ಪಿಸಿದರು.
ಭವ್ಯ ಶ್ರೀ ರಾಮ ಮಂದಿರ ನಿರ್ಮಾಣವಾಗುತ್ತಿರುವ ಅಯೋಧ್ಯೆಗೆ ಚಿತ್ತೈಸಿದ ಕಾಶೀಮಠಾಧೀಶರನ್ನು ಗೌರವಪೂರ್ವಕವಾಗಿ ಸ್ವಾಗತಿಸಿ, ನಿರ್ಮಾಣ ಹಂತದಲ್ಲಿರುವ ದೇವಸ್ಥಾನದ ಯೋಜನಾ ಕೆಲಸಕಾರ್ಯಗಳನ್ನು ಅಯೋಧ್ಯಾ ರಾಮಜನ್ಮಭೂಮಿ ಟ್ರಸ್ಟ್ ಪ್ರಮುಖರಾದ ಗೋಪಾಲ್ ಹಾಗೂ ಪದಾಧಿಕಾರಿಗಳು ವಿವರಿಸಿದರು.

ಇದೇ ಸಂದರ್ಭದಲ್ಲಿ ಶ್ರೀಗಳ ಅಮೃತಹಸ್ತದಿಂದ ನಿಧಿಕಲಶಕ್ಕೆ ಸ್ವರ್ಣ ಹಾಗೂ ಬೆಳ್ಳಿ ಅರ್ಪಿಸಲಾಯಿತು. ಶ್ರೀರಾಮ ಲಲ್ಲಾನ ದರ್ಶನ ಪಡೆದ ಶ್ರೀಮದ್ ಸಂಯಮೀಂದ್ರ ತೀರ್ಥರು ಭಜಕರಿಗೆ ಸಭಾ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು. ರಾಮಲಲ್ಲಾನ ಸನ್ನಿಧಿಯಲ್ಲಿ ಜಿಎಸ್ ಬಿ ಸಮುದಾಯದ ಭಕ್ತವೃಂದಕ್ಕೆ ಭಜನಾ ಸೇವೆ ನೀಡುವ ಅವಕಾಶ ಸಿಕ್ಕಿದ್ದು, ಇದು ತಮ್ಮ ಭಾಗ್ಯ ಎಂದು ಭಜಕರು ಹರ್ಷ ವ್ಯಕ್ತಪಡಿಸಿದರು. ಕಾಶೀಮಠದಿಂದ ಅಯೋಧ್ಯೆಯಲ್ಲಿ ಅನ್ನದಾನದ ಸೇವೆ ನಡೆಯುತ್ತಿದ್ದು, ನಿತ್ಯ ಭಕ್ತರು ಪ್ರಸಾದ ಸ್ವೀಕರಿಸುತ್ತಿದ್ದಾರೆ. ಸುಕೃತೀಂದ್ರ ಸೇವಾ ಪ್ರತಿಷ್ಠಾನ ಕಾರ್ಯಕ್ರಮವನ್ನು ಆಯೋಜಿಸಿದೆ.