KARNATAKA
ಕೆಎಎಸ್ ಅಧಿಕಾರಿ ಮನೆಯಲ್ಲಿ ಕೆಜಿಗಟ್ಟಲೆ ಬಂಗಾರ
ಬೆಂಗಳೂರು ನವೆಂಬರ್ 7: ಆದಾಯಕ್ಕಿಂತಲೂ ಅಧಿಕ ಆಸ್ತಿ ಹೊಂದಿರುವ ಆರೋಪದ ಮೇಲೆ ಇಂದು ಬೆಳ್ಳಂಬೆಳಗ್ಗೆ ಕೆಎಎಸ್ ಅಧಿಕಾರಿ ಡಾ. ಸುಧಾ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕೆಎಎಸ್ ಅಧಿಕಾರಿಯ ಖಜಾನೆ ನೋಡಿ ಅಧಿಕಾರಿಗಳೇ ದಂಗಾಗಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಕೆಎಎಸ್ ಅಧಿಕಾರಿ ಡಾ.ಬಿ. ಸುಧಾ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಶನಿವಾರ ಬೆಳಿಗ್ಗೆಯೇ ಆರು ಸ್ಥಳಗಳ ಮೇಲೆ ದಾಳಿ ನಡೆಸಿದೆ.
ಸುಧಾ ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಯಲ್ಲಿದ್ದರು. ಪ್ರಸ್ತುತ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಆಡಳಿತಾಧಿಕಾರಿ ಹುದ್ದೆಯಲ್ಲಿದ್ದಾರೆ. ಆರೋಪಿ ಅಧಿಕಾರಿ ವಿರುದ್ಧ ಸಾರ್ವಜನಿಕರೊಬ್ಬರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಈ ಕುರಿತು ತನಿಖೆ ನಡೆಸುವಂತೆ ನ್ಯಾಯಾಲಯ ಎಸಿಬಿಗೆ ಆದೇಶಿಸಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು, ಶೋಧ ನಡೆಸುತ್ತಿದ್ದಾರೆ.
ಕೊಡಿಗೇಹಳ್ಳಿಯ ಭವ್ಯ ಬಂಗಲೆಯಲ್ಲಿ ವಾಸವಾಗಿರುವ ಸುಧಾ ಬಳಿ ಕೆಜಿ ಗಟ್ಟಲೆ ಚಿನ್ನಾಭರಣ ಹಾಗೂ ಸುಮಾರು 10 ಲಕ್ಷ ನಗದು ಸಿಕ್ಕಿದೆ. ಚಿನ್ನದ ಡಾಬಾ, ಕಾಸಿನ ಸರ, ಉಂಗುರಗಳನ್ನು ಜಪ್ತಿ ಮಾಡಲಾಗಿದೆ. ಚಿನ್ನದ ಸರಗಳ ರಾಶಿ ಹಾಗೂ ಕಿವಿಯೋಲೆಗಳು ಪತ್ತೆಯಾಗಿವೆ.
ಸತತ 5 ಗಂಟೆಯಿಂದ ಸುಧಾ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎಸಿಬಿ ದಾಳಿ ಮಾಡಿದಾಗ ಅಧಿಕಾರಿ ಸುಮಾರು ಅರ್ಧ ಗಂಟೆಗಳ ಕಾಲ ಡೋರ್ ಓಪನ್ ಮಾಡದೇ ಇದ್ದರು.
ಸುಧಾ ಅವರ ಬೆಂಗಳೂರಿನ ಮನೆ, ಕಚೇರಿ ಸೇರಿದಂತೆ 6 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೊತೆಗೆ ಉಡುಪಿ ಜಿಲ್ಲೆಯ ಹೆಬ್ರಿ ಬಳಿಯ ತೆಂಕಬಟ್ಟಿನ ಮನೆ ಮೇಲೂ ದಾಳಿ ನಡೆಸಲಾಗಿದೆ. ಈ ಹಿಂದೆ ಬಿಡಿಎನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಡಾ. ಬಿ. ಸುಧಾ ಅವರ ವಿರುದ್ಧ ಎಸಿಬಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಹಾಗೂ ಅವ್ಯವಹಾರದ ಕುರಿತಾಗಿ ದೂರು ದಾಖಲಾಗಿತ್ತು. ಸುಧಾ ಪ್ರಸ್ತುತ ಜೈವಿಕ ತಂತ್ರಜ್ಞಾನ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.