KARNATAKA
ಅತುಲ್ ಸುಭಾಷ್ ಪ್ರಕರಣ – ಪತ್ನಿ ಸೇರಿದಂತೆ ಮೂವರು ಅರೆಸ್ಟ್
ಬೆಂಗಳೂರು ಡಿಸೆಂಬರ್ 15: ಸಾಫ್ಟವೇರ್ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿಯನ್ನು ಅರೆಸ್ಟ್ ಮಾಡಿದ್ದಾರೆ.
ಅತುಲ್ ಪತ್ನಿ ನಿಖಿತಾ ಸಿಂಘಾನಿಯರನ್ನು ಹರಿಯಾಣದ ಗುರುಗ್ರಾಮದಲ್ಲಿ ಹಾಗೂ ತಾಯಿ ನಿಶಾ ಸಂಘಾನಿಯಾ ಹಾಗೂ ಸಹೋದರ ಅನುರಾಗ್ ಸಿಂಘಾನಿಯಾ ಅವರನ್ನು ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾರತ್‌ಹಳ್ಳಿ ಠಾಣೆ ಪೊಲೀಸರು ಉತ್ತರ ಪ್ರದೇಶದ ಜೋನಾಪುರದಲ್ಲಿರುವ ಪತ್ನಿ ನಿಖಿತಾ ಸಿಂಘಾನಿಯಾ ಮನೆ ಬಾಗಿಲಿಗೆ ಡಿಸೆಂಬರ್ 13ರಂದು ಸಮನ್ಸ್ ಅಂಟಿಸಿ, ಮೂರು ದಿನದೊಳಗಾಗಿ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದರು. ‘ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಶಿವಕುಮಾರ್ ತಿಳಿಸಿದ್ದಾರೆ.
ಖಾಸಗಿ ಕಂಪನಿಯ ನಿರ್ದೇಶಕ, ಉತ್ತರ ಪ್ರದೇಶದ ಅತುಲ್ ಸುಭಾಷ್ ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದರು. ಸಹೋದರ ಬಿಕಾಸ್ ಕುಮಾರ್ ಅವರು ನೀಡಿದ ದೂರು ಆಧರಿಸಿ ಅತುಲ್ ಸುಭಾಷ್ ಅವರ ಪತ್ನಿ, ಆಕೆಯ ತಾಯಿ, ಸಹೋದರ ಹಾಗೂ ಚಿಕ್ಕಪ್ಪನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.