KARNATAKA
ಸಿಎಂ ಸಿದ್ದರಾಮಯ್ಯರ ಅರ್ಜಿ ವಿಚಾರಣೆ ಆಗಸ್ಟ್. 29 ಕ್ಕೆ ಮುಂದೂಡಿದ ಕರ್ನಾಟಕ ಹೈಕೋರ್ಟ್
ಬೆಂಗಳೂರು : ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ನೀಡಿರುವ ಅಭಿಯೋಜನಾ ಮಂಜೂರಾತಿ ವಜಾ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನಡೆಸಿದ್ದು ಅರ್ಜಿ ವಿಚಾರಣೆಯನ್ನು ಆಗಸ್ಟ್ 29 ಕ್ಕೆ ಮುಂದೂಡಿತು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತನ್ನ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದನ್ನು ಪ್ರಶ್ನೆ ಮಾಡಿ ಸಿಎಂ ಸಿದ್ದರಾಮಯ್ಯ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಇಂದು ಸೋಮವಾರ ಬೆಳಿಗ್ಗೆಯೇ ಸಿಎಂ ಹೈಕೋರ್ಟ್‌ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಮಧ್ಯಾಹ್ನ ಕೋರ್ಟ್‌ನಲ್ಲಿ ವಾದ ನಡೆಯಿತು. ರಾಜ್ಯಪಾಲರ ಪರವಾಗಿ ತುಷಾರ್ ಎಂಬ ವಕೀಲರು, ಸಿದ್ದರಾಮಯ್ಯ ಪರವಾಗಿ ಅಭಿಷೇಕ್ ಮನು ಸಿಂಗ್ವಿಯವರು ವಾದ ಮಂಡನೆ ಮಾಡಿದರು.
ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಮುಡಾ ಭೂ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಶನ್‌ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ತಕ್ಷಣ ಯಾವುದೇ ಕ್ರಮಕೈಗೊಳ್ಳದಂತೆ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿ ಮುಂದಿನ ವಿಚಾರಣೆ ನಡೆಯುವ ಆಗಸ್ಟ್ 29ಕ್ಕೆ ಮುಂದೂಡಿತು.
ಈ ನಡುವೆ ಸಿದ್ದರಾಮಯ್ಯ ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ರಾಜ್ಯಪಾಲರ ಅಭಿಯೋಜನಾ ಮಂಜೂರಾತಿ ಆದೇಶವು ಕಾನೂನು ಮತ್ತು ಸಂವಿಧಾನಬಾಹಿರ ಎಂದು ವಾದಿಸಿದ್ದಾರೆ. ಅರ್ಜಿಯಲ್ಲಿನ ಪ್ರಮುಖ ವಾದಗಳು ಇಂತಿವೆ:
- ರಾಜ್ಯ ಸಂಪುಟವು ಆಗಸ್ಟ್ 1ರಂದು ನೀಡಿರುವ ಸಲಹೆ ಧಿಕ್ಕರಿಸಿ ಕೈಗೊಂಡಿರುವ ರಾಜ್ಯಪಾಲರ ನಿರ್ಧಾರವು ಅಸಾಂವಿಧಾನಿಕವಾಗಿದೆ. ಸಂವಿಧಾನದ 163ನೇ ವಿಧಿಯ ಅನುಸಾರ ರಾಜ್ಯಪಾಲರು ಆಕ್ಷೇಪಾರ್ಹವಾದ ಆದೇಶ ಮಾಡಿಲ್ಲ. ತರ್ಕರಹಿತವಾಗಿ ಮತ್ತು ಸಕಾರಣವಿಲ್ಲದ ಅಭಿಯೋಜನಾ ಮಂಜೂರಾತಿ ಆದೇಶವನ್ನು ತಿರಸ್ಕರಿಸಬೇಕು. ರಾಜ್ಯಪಾಲರು ಕಾನೂನಿನ ಎಲ್ಲಾ ಅಂಶಗಳನ್ನು ಗಾಳಿಗೆ ತೂರಿ ಆದೇಶ ಮಾಡಿರುವುದರಿಂದ ಅದನ್ನು ವಜಾ ಮಾಡಬೇಕು.
- ರಾಜ್ಯಪಾಲರಿಗೆ ಸಲ್ಲಿಕೆಸಲಾಗಿದ್ದ ಅಪಾರ ದಾಖಲೆಗಳನ್ನು ಪರಿಶೀಲಿಸದೇ ಅವರು ಅಭಿಯೋಜನಾ ಮಂಜೂರಾತಿ ನೀಡಿದ್ದಾರೆ. ಹೀಗಾಗಿ, ಸ್ವತಂತ್ರವಾಗಿ ತೀರ್ಮಾನಿಸದೇ ಪೂರ್ವನಿರ್ಧರಿತ ಆದೇಶ ಮಾಡಿರುವುದರು ಸುಪ್ರೀಂ ಕೋರ್ಟ್ ರೂಪಿಸಿರುವ ತತ್ವಕ್ಕೆ ವಿರುದ್ಧವಾಗಿದೆ. ರಾಜ್ಯಪಾಲರು ಶರವೇಗದಲ್ಲಿ ಮಾಡಿರುವ ಆದೇಶವನ್ನು ನೋಡಿದರೆ ಯಾಂತ್ರಿಕವಾಗಿ ಕ್ರಮಕೈಗೊಳ್ಳಲಾಗಿದೆಯೇ ವಿನಾ ಕಾನೂನಿನ ವ್ಯಾಪ್ತಿಯಲ್ಲಿ ನಿರ್ಧರಿಸಿಲ್ಲ ಎಂಬುದು ತಿಳಿಯುತ್ತದೆ.
- ಪೂರ್ವಾನುಮತಿ ಕೋರಿ ಮೂರು ಅರ್ಜಿಗಳು (ಟಿ ಜೆ ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ಕುಮಾರ್) ರಾಜ್ಯಪಾಲರಿಗೆ ಸಲ್ಲಿಕೆಯಾಗಿವೆ. ಆದರೆ, ಒಂದು ಅರ್ಜಿಯಲ್ಲಿ ಮಾತ್ರ ಅವರು ತನಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಸ್ನೇಹಮಯಿ ಕೃಷ್ಣ ಮತ್ತು ಎಸ್ ಪಿ ಪ್ರದೀಪ್ ಕುಮಾರ್ ಅವರು ಸಲ್ಲಿಸಿರುವ ಅರ್ಜಿಗಳ ಮಾಹಿತಿ ನೀಡಲಾಗಿಲ್ಲ. ಈ ಮೂಲಕ ಆ ಅರ್ಜಿಗಳ ಆರೋಪಕ್ಕೆ ಪ್ರತಿಕ್ರಿಯಿಸಲು ಅವಕಾಶ ಮಾಡಿಕೊಟ್ಟಿಲ್ಲ. ನಿರ್ದಿಷ್ಟ ಅರ್ಜಿಗೆ ಸಂಬಂಧಿಸಿ ಶೋಕಾಸ್ ನೋಟಿಸ್ ನೀಡಿರುವ ಕ್ರಮವು ಪ್ರಕ್ರಿಯೆಯ ಅಕ್ರಮವಾಗಿದೆ. ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ಕುಮಾರ್ ದೂರಿನ ಅರ್ಜಿಗಳ ಬಗ್ಗೆ ಮಾಹಿತಿ ನೀಡದೇ ಇರುವ ಮೂಲಕ ರಾಜ್ಯಪಾಲರು ಸ್ವೇಚ್ಛೆ ಮತ್ತು ತಾರತಮ್ಯದಿಂದ ನಡೆದುಕೊಂಡಿದ್ದಾರೆ. ಇದು ರಾಜ್ಯಪಾಲರ ಪಕ್ಷಾತೀತ ನಿರ್ಧಾರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
- ಅತ್ಯುನ್ನತ ಸ್ಥಾನದಲ್ಲಿರುವ ಹಲವರ ವಿರುದ್ಧ ಅಭಿಯೋಜನಾ ಮಂಜೂರಾತಿ ಕೋರಿರುವ ಅರ್ಜಿಗಳು ವರ್ಷಗಳಿಂದ ಬಾಕಿ ಇರುವಾಗ ರಾಜ್ಯಪಾಲರು ತಮ್ಮ ವಿಚಾರದಲ್ಲಿ ಶರವೇಗದಲ್ಲಿ ಕೈಗೊಂಡಿರುವ ನಡೆಯು ಪಕ್ಷಪಾತದಿಂದ ಕೂಡಿದೆ.
- ಅಧಿಕೃತ ಕರ್ತವ್ಯ ನಿರ್ವಹಣೆಯಲ್ಲಿ ಮುಖ್ಯಮಂತ್ರಿಯಾಗಿ ತಾನು ಯಾವ ಅಪರಾಧ ಎಸಗಿದ್ದೇನೆ ಎಂಬುದನ್ನು ಅಭಿಯೋಜನಾ ಮಂಜೂರಾತಿಯಲ್ಲಿ ವಿವರಿಸಲಾಗಿಲ್ಲ. ಮಧ್ಯಪ್ರದೇಶ ವಿಶೇಷ ಪೊಲೀಸ್ ಘಟಕ ಮತ್ತು ಮಧ್ಯಪ್ರದೇಶ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ “ರಾಜ್ಯಪಾಲರ ವಿವೇಚನಾಧಿಕಾರವನ್ನು ಸಾಂವಿಧಾನಿಕ ಮತ್ತು ಸ್ಥಾಪಿತ ಕಾನೂನು ತತ್ವದ ಮಿತಿಯಲ್ಲಿ ಬಳಕೆ ಮಾಡಬೇಕು. ಇದರಿಂದ ವಿಮುಖರಾಗಿ ಆದೇಶ ಮಾಡುವುದು ಕಾನೂನಿನ ದುರುದ್ದೇಶವಾಗಲಿದ್ದು, ಅದು ಅಸಿಂಧುವಾಗಲಿದೆ” ಎಂದು ಹೇಳಿದೆ.
- ಕೆಲವು ಸ್ಥಾಪಿತ ಹಿತಾಸಕ್ತಿಗಳ ರಾಜಕೀಯ ಉದ್ದೇಶವಾಗಿರುವ ಸರ್ಕಾರವನ್ನು ಶಿಥಿಲಗೊಳಿಸುವ ಉದ್ದೇಶದಿಂದ ಆಕ್ಷೇಪಾರ್ಹ ಆದೇಶ ಮಾಡಲಾಗಿದೆಯೇ ವಿನಾ ಉತ್ತಮ ಆಡಳಿತದ ಉದ್ದೇಶದಿಂದಲ್ಲ.
- ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ, ವಾಸ್ತವಿಕ ಮತ್ತು ಪ್ರಕ್ರಿಯೆಯ ವಿಚಾರಗಳನ್ನು ಸಮಗ್ರವಾಗಿ ಚರ್ಚಿಸಿ ರಾಜ್ಯಪಾಲರು ಅಬ್ರಹಾಂ ಅರ್ಜಿ ತಿರಸ್ಕರಿಸಬೇಕು ಎಂದು ಸಂಪುಟವು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿತ್ತು. ಸ್ಥಾಪಿತ ಕಾನೂನಿನ ತತ್ವ, ರಾಜ್ಯಪಾಲರ ಸಾಂವಿಧಾನಿಕ ಚೌಕಟ್ಟು ಮತ್ತು ಕರ್ತವ್ಯವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕಾರಣಗಳನ್ನು ಒಳಗೊಂಡ ಶಿಫಾರಸ್ಸು ಮಾಡಲಾಗಿತ್ತು.
- ಅಭಿಯೋಜನಾ ಮಂಜೂರಾತಿ ಕೋರಿರುವ ಅರ್ಜಿಯಲ್ಲಿ ಕಾನೂನನ್ನು ಗಾಳಿಗೆ ತೂರಲಾಗಿದೆ. ಇದನ್ನು ಪರಿಗಣಿಸುವಲ್ಲಿ ರಾಜ್ಯಪಾಲರು ವಿಫಲರಾಗಿದ್ದಾರೆ. ಟಿ ಜೆ ಅಬ್ರಹಾಂ ಜುಲೈ 26ರಂದು ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್ 17ಎ ಮತ್ತು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 218 ಅಡಿ ಪೂರ್ವಾನುಮತಿ ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಸಂಪುಟವು ಸಲ್ಲಿಸಿರುವ ಪ್ರತಿಯಲ್ಲಿ ಉಲ್ಲೇಖಿಸಿರುವ ತೀರ್ಪುಗಳ ಪ್ರಕಾರ ಅಬ್ರಹಾಂ ಅರ್ಜಿ ಅನೂರ್ಜಿತವಾಗಲಿದೆ. ಸೆಕ್ಷನ್ 17ಎ ಅಡಿ ಪೂರ್ವಾನುಮತಿ ಕೋರಿ ಅರ್ಜಿಯನ್ನು ಪೊಲೀಸ್ ಅಧಿಕಾರಿ ಸಲ್ಲಿಸಬೇಕೆ ವಿನಾ ಬೇರಾರೂ ಅಲ್ಲ. ಇದನ್ನು ಪರಿಗಣಿಸದೇ ಅಭಿಯೋಜನಾ ಮಂಜೂರಾತಿ ನೀಡಿರುವ ರಾಜ್ಯಪಾಲರ ಆದೇಶ ಬದಿಗೆ ಸರಿಸಲು ಅರ್ಹವಾಗಿದೆ.
- ತನ್ನ ಪತ್ನಿ ಅವರಿಗೆ ಸಂಬಂಧಿಸಿದ 1,48,104 ಚದರ ಅಡಿ ಜಮೀನು ವಶಪಡಿಸಿಕೊಂಡಿರುವ ಮುಡಾ 38,284 ಚದರ ಅಡಿ ಜಾಗವನ್ನು 14 ನಿವೇಶನಗಳ ರೂಪದಲ್ಲಿ ನೀಡಿದೆ. ಅಬ್ರಹಾಂ ಆರೋಪವನ್ನು ಒಂದೊಮ್ಮೆ ಒಪ್ಪಿದರೂ ಯಾವುದೇ ಅಪರಾಧ ಅದರಲ್ಲಿ ಕಾಣುವುದಿಲ್ಲ. ಹೀಗಾಗಿ, ವಾಸ್ತವಿಕ ಅಂಶಗಳು ಮತ್ತು ಕಾನೂನಿನ ದೃಷ್ಟಿಯಲ್ಲಿ ಪೂರ್ವಾನುಮತಿ ಕೋರಿಕೆ ಆಧಾರರಹಿತವಾಗಿರುವುದರಿಂದ ರಾಜ್ಯಪಾಲರು ಆಕ್ಷೇಪಾರ್ಹ ಆದೇಶ ಮಾಡಬಾರದಿತ್ತು.
- ದೂರುದಾರ ಅಬ್ರಹಾಂ ಅವರು ಜುಲೈ 18ರಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಆನಂತರ ಪ್ರಿಯಾಂಕಾ ಶ್ರೀವಾಸ್ತವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕಡ್ಡಾಯ ನಿಯಮಗಳನ್ನು ಪಾಲಿಸಲಾಗಿಲ್ಲ. ಹೀಗಾಗಿ, ಪೂರ್ವಾನುಮತಿ ಕೋರಿರುವ ಮನವಿಯು ಆತುರ ನಿರ್ಧಾರ ಎಂದು ರಾಜ್ಯಪಾಲರು ಪರಿಗಣಿಸಲು ವಿಫಲರಾಗಿದ್ದಾರೆ.
- ಅಬ್ರಹಾಂ ಅವರು ಕಳೆದ 25 ವರ್ಷಗಳಿಂದ ಹಲವು ಸರ್ಕಾರಿ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿ, ಅಭಿಯೋಜನಾ ಮಂಜೂರಾತಿ ಕೋರಿದ್ದಾರೆ. ಹಾಲಿ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಮಾತ್ರ ಪೂರ್ವಾನುಮತಿ ಕೋರಿದ್ದಾರೆ. ತಮ್ಮ ಆಯ್ಕೆಗೆ ಅನುಗುಣವಾಗಿ ಮತ್ತು ಯಾರದೋ ಅನುಕೂಲಕ್ಕಾಗಿ ಕ್ರಿಮಿನಲ್ ಪ್ರಕ್ರಿಯೆ ಜಾರಿಗೊಳಿಸಲಾಗದು. ಈ ವಿಚಾರದಿಂದ ತಿಳಿಯುವುದೇನೆಂದರೆ ಖಾಸಗಿ ಪ್ರತಿವಾದಿಗಳು ರಾಜಕೀಯ ಭಾವೋದ್ರೇಕಕ್ಕಾಗಿ ಮಾತ್ರ ಅರ್ಜಿ ಸಲ್ಲಿಸಿದ್ದು, ಅವರ ನಡೆಯಲ್ಲಿ ಪ್ರಾಮಾಣಿಕತೆ ಇಲ್ಲ.
- ಅಬ್ರಹಾಂ ಬ್ಲ್ಯಾಕ್‌ಮೇಲ್, ಸುಲಿಗೆ, ವೈಯಕ್ತಿಕ ಕಾರಣಕ್ಕಾಗಿ ಕಾನೂನು ಪ್ರಕ್ರಿಯೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಇವರ ನಡತೆಯನ್ನು ಹಲವು ನ್ಯಾಯಾಲಯಗಳು ಟೀಕಿಸಿದ್ದು, ಪ್ರಕರಣವೊಂದರಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ವಿಭಾಗವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅಬ್ರಹಾಂಗೆ ಸುಪ್ರೀಂ ಕೋರ್ಟ್ 25 ಲಕ್ಷ ರೂಪಾಯಿ ದಂಡ ವಿಧಿಸಿದೆ.
- ಅಬ್ರಹಾಂ ಅವರ ಮಹಿಳೆಯ ಘನತೆಗೆ ಧಕ್ಕೆ ತಂದಿರುವ ಆರೋಪದ ಮೇಲೆ ಪ್ರಕರಣವಿದೆ. ಅರ್ಜಿದಾರ ಅಬ್ರಹಾಂ ಅವರ ಕ್ರಿಮಿನಲ್ ಹಿನ್ನೆಲೆ ಮತ್ತು ವಿಶ್ವಾಸಾರ್ಹತೆಯನ್ನು ಪರಿಗಣಿಸದೇ ಪೂರ್ವಾನುಮತಿ ಅರ್ಜಿ ಪುರಸ್ಕರಿಸಿರುವುದು ರಾಜ್ಯಪಾಲರ ವಿವೇಚನಾಧಿಕಾರದ ಗಂಭೀರ ದೋಷವಾಗಿದೆ. ಇದು ಕಾನೂನಾತ್ಮಕವಾಗಿ ಊರ್ಜಿತವಾಗುವುದಿಲ್ಲ.
You must be logged in to post a comment Login