Connect with us

    KARNATAKA

    ಯೂಟ್ಯೂಬರ್ ಗಳಿಗೆ ಹೈಕೋರ್ಟ್ ವಾರ್ನಿಂಗ್ -ಕಲಾಪದ ವಿಡಿಯೋಗಳನ್ನು ಅನುಮತಿ ಇಲ್ಲದೆ ಬಳಕೆ ಮಾಡದಂತೆ ನಿರ್ಬಂಧ

    ಬೆಂಗಳೂರು ಸೆಪ್ಟೆಂಬರ್ 20 : ಯುಟ್ಯೂಬ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಕರ್ನಾಟಕ ಹೈಕೋರ್ಟ್ ಕಲಾಪಗಳನ್ನು ರೆಕಾರ್ಡ್ ಮಾಡಿ ಯಟ್ಯೂಬರ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಲಾಗುತ್ತಿದ್ದು, ಹೈಕೋರ್ಟ್ ನ್ಯಾಯಾಧೀಶರ ಕಲಾಪದ ವೇಳೆ ಮೌಖಿಕವಾಗಿ ಮಾತನಾಡಿದ ವಿಡಿಯೋ ಒಂದು ವೈರಲ್ ಆದ ಬೆನ್ನಲ್ಲೇ ಇದೀಗ ಹೈಕೋರ್ಟ್ ಎಚ್ಚರಿಕೆ ಸಂದೇಶ ಹಾಕಲಾರಂಭಿಸಿದೆ.


    ಕರ್ನಾಟಕ ಹೈಕೋರ್ಟ್ ಎಲ್ಲಾ ಬೆಂಚ್ ಗಳ ಕಲಾಪಗಳನ್ನು ನೇರ ಪ್ರಸಾರ ಮಾಡುತ್ತಿದೆ. ಇತ್ತೀಚೆಗೆ ಯುಟ್ಯೂಬ್ ಚಾನೆಲ್ ಗಳು ಕಲಾಪಗಳಲ್ಲಿ ಜಡ್ಜ್ ಗಳು ವಿಚಾರಣೆ ವೇಳೆ ನೀಡುವ ಕೆಲವು ಹೇಳಿಕೆಗಳನ್ನು ಎಡಿಟ್ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ. ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಗೋರಿಪಾಳ್ಯವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ ಮತ್ತು ಮಹಿಳಾ ವಕೀಲೆಯೊಬ್ಬರ ಜೊತೆ ಲಘುವಾಗಿ ವರ್ತಿಸಿದ ವಿಡಿಯೋ ಕ್ಲಿಪ್‌ಗಳು ರಾಷ್ಟ್ರಾದ್ಯಂತ ಚರ್ಚೆಗೀಡಾದ ಬೆನ್ನಿಗೇ ನ್ಯಾಯಾಲಯ ನೋಟಿಸ್‌ ಮೂಲಕ ಎಚ್ಚರಿಕೆ ನೀಡಲಾರಂಭಿಸಿದೆ.


    ಈ ಸಂಬಂಧದ ನೋಟಿಸ್‌ಅನ್ನು ಪ್ರತಿಯೊಂದು ಕೋರ್ಟ್‌ ಹಾಲ್‌ಗಳ ವಿಡಿಯೊ ಕಾನ್ಫರೆನ್ಸ್‌ ಪರದೆಯ ಮೇಲೆ ಕಲಾಪ ಆರಂಭಕ್ಕೂ ಮುನ್ನ ಮತ್ತು ಮಧ್ಯಾಹ್ನ ಭೋಜನದ ವೇಳೆಯಲ್ಲಿ ಪ್ರಸಾರ ಮಾಡಲಾಗಿದೆ.
    “ಅನುಮತಿ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆ ಹೊರತುಪಡಿಸಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ (ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳು) ಕಲಾಪದ ಲೈವ್‌ ಸ್ಟ್ರೀಮಿಂಗ್‌ ಅಥವಾ ಹೈಕೋರ್ಟ್‌ ಯೂಟ್ಯೂಬ್‌ ಚಾನಲ್‌ನಲ್ಲಿನ ವಿಡಿಯೊಗಳನ್ನು ರೆಕಾರ್ಡ್‌ ಮಾಡುವುದಾಗಲಿ, ಪ್ರಸರಣ ಮಾಡುವುದಾಗಲಿ ಮಾಡುವಂತಿಲ್ಲ” ಎಂದು ಸಂದೇಶದಲ್ಲಿ ಹೇಳಲಾಗಿದೆ. ಈ ನಿರ್ಬಂಧವು ಎಲ್ಲಾ ಸಂದೇಶ ಅಪ್ಲಿಕೇಶನ್‌ಗಳಿಗೂ ಅನ್ವಯಿಸಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

    ಪೂರ್ವಾನುಮತಿ ಪಡೆಯದೇ ಲೈವ್‌ ಸ್ಟ್ರೀಮಿಂಗ್‌ನ ಮರು ಪ್ರಸಾರ, ವರ್ಗಾವಣೆ, ಅಪ್‌ಲೋಡ್‌ ಮಾಡುವುದು, ಪೋಸ್ಟ್‌ ಮಾಡುವುದು, ಮಾರ್ಪಾಡು ಮಾಡುವುದು ಪ್ರಸಾರ ಅಥವಾ ಮರು ಪ್ರಸಾರವನ್ನು ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯದ ಕಲಾಪವನ್ನು ರೆಕಾರ್ಡ್‌ ಮಾಡಲು ಅಥವಾ ಅದರ ನಿರೂಪಣೆಗೆ ಯಾವುದೇ ವ್ಯಕ್ತಿಗೆ ಅನುಮತಿ ನೀಡಲಾಗಿಲ್ಲ. ನ್ಯಾಯಾಲಯದ ನಿಯಮ ಉಲ್ಲಂಘಿಸಿದ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಾನೂನಿನಡಿ ಕ್ರಮಕೈಗೊಳ್ಳಲಾಗುತ್ತದೆ. ನ್ಯಾಯಾಲಯದ ಕಲಾಪದ ರೆಕಾರ್ಡಿಂಗ್‌ ಮತ್ತು ಆರ್ಕೈವ್‌ ದತ್ತಾಂಶದ ಮೇಲೆ ನ್ಯಾಯಾಲಯಕ್ಕೆ ವಿಶೇಷ ಹಕ್ಕುಸ್ವಾಮ್ಯವಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply