LATEST NEWS
ಕಾರ್ಕಳ ಪರುಶುರಾಮ ಪ್ರತಿಮೆ ಅರ್ಧ ನಕಲಿ ಅರ್ಧ ಅಸಲಿ – ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ
ಉಡುಪಿ ಸೆಪ್ಟೆಂಬರ್ 23: ಭಾರೀ ವಿವಾದಕ್ಕೆ ಕಾರಣವಾಗಿರುವ ಕಾರ್ಕಳದ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಪ್ರತಿಷ್ಠಾಪಿಸಿರುವ ಪರುಶುರಾಮ ಪ್ರತಿಮೆ ಅರ್ಧ ನಕಲಿ ಅರ್ಧ ಅಸಲಿ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಪರಶುರಾಮ ಪ್ರತಿಮೆ ಇರುವ ಥೀಂ ಪಾರ್ಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಕಾರ್ಕಳದ ಬೈಲೂರಿನ ಸ್ಥಾಪಿಸಲಾಗಿರುವ ‘ಪರಶುರಾಮನ ಪ್ರತಿಮೆಯನ್ನು ಅಸಲಿ ಎಂದೂ ಹೇಳಲಾಗುತ್ತಿಲ್ಲ, ನಕಲಿ ಎಂದೂ ಹೇಳಲಾಗುತ್ತಿಲ್ಲ. ಪ್ರತಿಮೆಯ ಕೈ, ಮುಖ ಸೇರಿದಂತೆ ಪ್ರತಿಮೆಯ ಅರ್ಧ ಭಾಗವನ್ನೇ ಬದಲಿಸಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.
ವಿಧಾನಸಭಾ ಚುನಾವಣೆ ಹತ್ತಿರ ಇರುವಾಗ ರಾಜಕೀಯ ಲಾಭಕ್ಕಾಗಿ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ವೇಗವಾಗಿ ಮುಗಿಸಲು ಹೋಗಿ ಹಲವು ತಪ್ಪುಗಳನ್ನು ಎಸಗಿರುವುದು ಕಂಡುಬಂದಿದೆ. ಯಾವ ಇಲಾಖೆಯ ಅಧಿಕಾರಿಗಳ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದರು.
ಪ್ರತಿಮೆ ಎತ್ತರದ ಪ್ರದೇಶದಲ್ಲಿರುವುದರಿಂದ ಮಳೆ ಗಾಳಿಗೆ ಬಿದ್ದು ಅವಘಡಗಳಾದರೆ ಯಾರು ಹೊಣೆ ಎಂಬ ಆತಂಕ ಕಾಡುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಮೆ ಸುರಕ್ಷಿತವಾಗಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿಮೆ ನಿರ್ಮಾಣ ಮಾಡಿರುವ ಬೆಂಗಳೂರಿನ ಕಲಾವಿದರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು. ಪರಶುರಾಮ ಪ್ರತಿಮೆ ಕಾಮಗಾರಿ ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು.