Connect with us

FILM

ಕಾಂತಾರ ಮತ್ತು ಧರ್ಮ: ಸಿನಿಮಾ ವಿವಾದದ ಬಗ್ಗೆ ನಟ ಕಿಶೋರ್‌ ಕುಮಾರ್‌ ಪೋಸ್ಟ್‌ ವೈರಲ್

ಬೆಂಗಳೂರು, ಅಕ್ಟೋಬರ್ 25: ಇತ್ತೀಚೆಗೆ ಬಿಡುಗಡೆಯಾದ ಕಾಂತಾರ ಚಿತ್ರದ ಸುತ್ತಲೂ ಸೃಷ್ಟಿಯಾಗಿರುವ ವಿವಾದದ ಕುರಿತು ನಟ ಕಿಶೋರ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಪ್ರಕಟಿಸಿರುವ ಅವರು, ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಮ್ಮ ಜನಪದೀಯರ ಕೋಲದ ಭೂತಕ್ಕೂ, ನೇಮದ ದೈವಕ್ಕೂ ಧರ್ಮದ ಬಣ್ಣ ಬಳಿಯುತ್ತಿರುವವರಲ್ಲಿ ಕಳಕಳಿಯ ಮನವಿ . ಅದೇ ದೈವದ ವೇಷ ಧರಿಸುವವನನ್ನು ಅಸ್ಪೃಷ್ಯನೆಂದು ಮನೆಯೊಳಗೆ ಸೇರಿಸದ, ಮನೆಯೊಳಗೆ ಬಂದರೆ ಶುದ್ಧಿ ಮಾಡಿಸುವ ಅಸ್ಪೃಷ್ಯತೆಯ ಆಚರಣೆಯಲ್ಲಿ ನಮಗೆ ಅಧರ್ಮದ ಬಣ್ಣ ಕಾಣುತ್ತಿಲ್ಲವೇಕೆ? ಜನರಿಗಾಗಿ ಬಾಂಬು ಸಿಡಿಸಿ ಜೀವತೆತ್ತ ಗರ್ನಾಲು ಸಾಹೇಬನ ಧರ್ಮ ಕಾಣುತ್ತಿಲ್ಲವೇಕೆ?

ಎಲ್ಲ ಒಳ್ಳೆಯ ಸಿನಿಮಾಗಳಂತೆ “ಕಾಂತಾರ” ಜಾತಿ, ಧರ್ಮ, ಭಾಷೆಗಳನ್ನು ಮೀರಿ ದೇಶದ ಜನಗಳನ್ನು ಬೆಸೆಯುತ್ತಿದೆ. ಮನರಂಜನೆಯ ಮೂಲಕವೇ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಿದೆ. ಅಂಥ ಸಿನಿಮಾವನ್ನು ಬಳಸಿ ಮೂಢನಂಬಿಕೆಯನ್ನೊ ಧರ್ಮಾಂಧತೆಯನ್ನೊ ಪ್ರಚೋದಿಸಿ ಜನಗಳನ್ನು ವಿಭಜಿಸುವ ಮಟ್ಟಕ್ಕೆ ಇಳಿದು ಬಿಟ್ಟರೆ ಇಂಥಾ ದೊಡ್ಡ ಗೆಲುವೂ ಮನುಷ್ಯತ್ವದ ದೊಡ್ಡ ಸೋಲಾಗಿಹೋದೀತು.

ಕೇವಲ ವೋಟಿಗಾಗಿ ಪಟೇಲ್ ಗಾಂಧಿ ಬೋಸ್ ನೆಹರು ಸಹಿತ ಕೋಟಿ ಕೋಟಿ ಸ್ವಾತಂತ್ರ್ಯ ಹೋರಾಟಗಾರರನ್ನೂ ಬಳಸುವ, ಬೈಯ್ಯುವ.. ರಾಷ್ಟ್ರ ಗೀತೆ, ಧ್ವಜ, ಲಾಂಛನ, ಕವಿಗಳನ್ನೂ ಬಿಡದೆ ಕಬಳಿಸಿದ ದ್ವೇಷದ ದಲ್ಲಾಳಿಗಳು ಸಿನಿಮಾಗಳನ್ನೂ ಕಬಳಿಸುವ ಮುನ್ನ ಒಂದು ಕ್ಷಣ ಯೋಚಿಸಿ.

ನಮ್ಮ ಸಿನಿಮಾಗಳು ನಮ್ಮ ಹೆಮ್ಮೆ. ಅವು ಧರ್ಮಾಂಧ ರಾಜಕಾರಣದ ದಾಳಗಳಾಗುವುದು ಬೇಡ. ನಟ ಕಿಶೋರ್‌ ಕುಮಾರ್‌ ಅವರು ಕಾಂತಾರ ಸಿನಿಮಾದಲ್ಲಿ ಮುರುಳೀಧರ್‌ ಎಂಬ ಪಾತ್ರವನ್ನು ನಿಭಾಯಿಸಿದ್ದಾರೆ. ನಟ ‘ಆ ದಿನಗಳು’ ಚೇತನ್‌ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಂತಾರ ಸಿನಿಮಾ ಕುರಿತು ಪೋಸ್ಟ್‌ ಪ್ರಕಟಿಸಿ, ‘ಭೂತಕೋಲ ಹಿಂದೂ ಸಂಸ್ಕೃತಿಯಲ್ಲ’ ಎಂದು ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಅವರ ವಿರುದ್ಧ ಪ್ರಕರಣವೂ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *