LATEST NEWS
ಕಂಚಿನಡ್ಕದ ಗುಳಿಗ ದೈವದ ಕಟ್ಟೆ ವಿವಾದ…!!
ಉಡುಪಿ ಜೂನ್ 13: ಕಂಚಿನಡ್ಕದ ಮಿಂಚಿನ ಬಾವಿ ಕ್ಷೇತ್ರದ ಗುಳಿಗ ದೈವದ ಕಟ್ಟೆ ವಿವಾದ ಇನ್ನು ಬಗೆಹರಿಯದೆ ಮತ್ತೆ ಗೊಂದಲಕ್ಕೆ ಕಾರಣವಾಗಿದೆ. ಹಿಂದೂಪರ ಸಂಘಟನೆಗಳು ಕರಸೇವೆ ಮಾಡಿ ಹೊಸದಾಗಿ ನಿರ್ಮಿಸಿದ್ದ ಗುಳಿಗ ದೈವದ ಕಟ್ಟೆಯನ್ನು ತೆರವುಗೊಳಿಸಿದ್ದು ಮತ್ತೆ ವಿವಾದಕ್ಕೆ ಕಾರಣವಾಗಿದೆ.
ಪಡುಬಿದ್ರಿ ಸಮೀಪದ ಕಂಚಿನಡ್ಕದ ಮಿಂಚಿನಬಾವಿ ಕ್ಷೇತ್ರದಲ್ಲಿ ಗುಳಿಗನ ದೈವ ಇತ್ತು ಎಂದು ಹಿಂದೂ ಪರ ಸಂಘಟನೆಗಳು ಆದಿತ್ಯವಾರ ಕರಸೇವೆಗೆ ಕರೆ ಮಾಡಿ ಕಂಚಿನಡ್ಕದ ಮಿಂಚಿನ ಬಾವಿ ಕ್ಷೇತ್ರಕ್ಕೆ ತಗಡು ಚಪ್ಪರ ಹಾಕಿದ್ದರು, ಆದರೆ ಇದಕ್ಕೆ ವಿರೋಧಿಸಿದ ಸ್ಥಳೀಯ ಮುಸ್ಲೀಂರು ಕಟ್ಟೆ ತೆರವಿಗೆ ಆಗ್ರಹಿಸಿದ್ದಾರೆ. ಈ ಕಟ್ಟೆ ನಿರ್ಮಾಣವಾದ ಜಾಗದಲ್ಲಿ ಯಾವುದೇ ದೈವದ ಕಲ್ಲು ಇರಲಿಲ್ಲ, ಗೇಟ್ ನಿರ್ಮಾಣ ಮಾಡುವುದಕ್ಕೆ ವಿರೋಧಿಸಿ ಹೊಸ ಕಟ್ಟೆ ನಿರ್ಮಾಣ ಮಾಡಿ ವಿವಾದ ಸೃಷ್ಟಿಸಲು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಆದರೆ ಹಿಂದಿನಿಂದಲೂ ಆ ಜಾಗದಲ್ಲಿ ಗುಳಿಗ ದೈವದ ಕಲ್ಲು ಇದ್ದು, ಕಲ್ಲು ಇದ್ದ ಜಾಗದಲ್ಲಿ ಗಲೀಜು ಆಗಬಾರದೆಂಬ ದೃಷ್ಟಿಯಿಂದ ಒಂದುವರೆ ಅಡಿಯ ಕಟ್ಟೆ ನಿರ್ಮಾಣ ಮಾಡಿದ್ದೇವೆ ಎಂದು ಹಿಂದೂ ಸಂಘಟನೆಗಳ ವಾದವಾಗಿದೆ. ಅಲ್ಲದೆ ಕಟ್ಟೆ ತೆರವುಗೊಳಿಸಲು ಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಈ ಸಂದರ್ಭ ಸ್ಥಳದಲ್ಲಿದ್ದ ಪೊಲೀಸರು ಎರಡು ತಂಡಗಳ ಮನವೊಲಿಸಿ ಜಾಗ ಖಾಲಿ ಮಾಡಿಸಿದ್ದಾರೆ.
ಆದರೆ ಕೆಲವೇ ನಿಮಿಷಗಳಲ್ಲಿ ಮತ್ತೆ ಸೇರಿದ ಮುಸ್ಲಿಮರು, ಕಟ್ಟೆ ತೆರವುಗೊಳಿಸದೆ ಜಾಗ ಖಾಲಿ ಮಾಡುವುದಿಲ್ಲವೆಂದು ಪಟ್ಟು ಹಿಡಿದರು. ಕೊನೆಗೆ ಮುಸ್ಲಿಮರ ಒತ್ತಾಯಕ್ಕೆ ಮಣಿದ ಪೊಲೀಸರು ಕ್ಷೇತ್ರದ ಕಮಿಟಿಯ ಮೂರು ಸದಸ್ಯರ ಸಮ್ಮುಖದಲ್ಲಿ ಕಟ್ಟೆ ತೆರವು ಗೊಳಿಸಿದರು. ಅಲ್ಲದೆ ಕಮಿಟಿ ಸದಸ್ಯರು ಚಿತ್ರೀಕರಣಕ್ಕೆ ಮುಂದಾದಾಗ ಅಡ್ಡಿಪಡಿಸಿದ್ದಾರೆ. ಕಟ್ಟೆ ನೆಲಸಮವಾಗುತ್ತಿದ್ದಂತೆ ಜಾಗದಿಂದ ಮುಸ್ಲಿಮರು ತೆರಳಿದ್ದು, ವಿಷಯ ತಿಳಿದು ಕಟ್ಟೆ ನಿರ್ಮಾಣವಾದ ಜಾಗಕ್ಕೆ ಆಗಮಿಸಿದ ಕ್ಷೇತ್ರ ಭಕ್ತರು, ದೈವದ ಕಟ್ಟೆಯ ಮುಂದೆ ತೆಂಗಿನ ಕಾಯಿ ಒಡೆದು ಅಕ್ರೋಶ ಹೊರಹಾಕಿದ್ದಾರೆ. ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಪೊಲೀಸರು ಸ್ಥಳದಲ್ಲಿ ಇಡೀ ರಾತ್ರಿ ಬಂದೋಬಸ್ತು ಕಲ್ಪಿಸಿದ್ದಾರೆ.