LATEST NEWS
ಕಂಬಳ ಗದ್ದೆಯ ಚಿರತೆ ತಡಂಬೈಲ್ ಕುಟ್ಟಿ ಇನ್ನಿಲ್ಲ….!!
ಉಡುಪಿ ಮಾರ್ಚ್ 8: ಕಂಬಳಗದ್ದೆಯಲ್ಲಿ ಚಾಂಪಿಯನ್ ಕೋಣಗಳಿಗೆ ಸರಿಸಾಟಿಯಾಗಿ ಅಸಂಖ್ಯಾತ ಪದಕಗಳಿಗೆ ಕೊರಳೊಡ್ಡಿದ್ದ ಕುಟ್ಟಿ ಎಂಬ ಕಂಬಳ ಗದ್ದೆಯ ಚಿರತೆ ಇದೀಗ ಶಾಶ್ವತ ನಿದ್ದೆಗೆ ಜಾರಿದೆ.
ಕಂಬಳ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಮೆರೆದಾಡಿದ್ದ ಕುಟ್ಟಿ ಎಂಬ ಕೋಣ ರವಿವಾರ ಮೃತಪಟ್ಟಿದೆ. ಕೆಸರು ಗದ್ದೆಯಲ್ಲಿ ಕ್ಷಣ ಮಾತ್ರದಲ್ಲಿ ಗುರಿ ಮುಟ್ಟುತ್ತಿದ್ದ ಕುಟ್ಟಿ ಅಲ್ಪ ಕಾಲದ ಅಸೌಖ್ಯದಿಂದ ಸಾವನ್ನಪ್ಪಿದೆ.
ಏದೋಟ್ಟು ರಾಜು ಶೆಟ್ಟಿಯವರ ಬಳಿಯಿದ್ದ ಇನ್ನೂ ಸಣ್ಣ ಪ್ರಾಯದ ಕುಟ್ಟಿ 2008-09ರ ಸೀಸನ್ ನಲ್ಲಿ ಮೀಯ್ಯಾರಿನಲ್ಲಿ ನಡೆದ ಅಭ್ಯಾಸದಲ್ಲಿ (ಕುದಿ) ಪಾಲ್ಗೊಂಡಿದ್ದ. ಚಿರತೆಯಂತೆ ಓಡುತ್ತಿದ್ದ ಕುಟ್ಟಿ ಅದಾಗಲೇ ಹಲವರ ಹುಬ್ಬು ಮೇಲೇರುವಂತೆ ಮಾಡಿದ್ದ. ಮುಂದೆ ಮಣಿಪಾಲದಲ್ಲಿ ನಡೆದ ಅನಂತ – ಮಾಧವ ಕಂಬಳದಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ ಓಡಿದ ಕುಟ್ಟಿ ದ್ವಿತೀಯ ಬಹುಮಾನ ಪಡೆದಿದ್ದ.
ಈ ಓಟವನ್ನು ಗಮನಿಸಿದ ಅಲೆವೂರು ರಾಘು ಶೆಟ್ಟಿಯವರು ಆತನನ್ನು ತಮ್ಮ ಬಳಗಕ್ಕೆ ಸೇರಿಸಿದ್ದರು. ಅಲ್ಲಿಗೆ ಆತ ಅಲೆವೂರು ಕುಟ್ಟಿ ಎಂದು ಹೆಸರಾದ. ಬಾರಾಡಿ ಸೂರ್ಯ- ಚಂದ್ರ ಕಂಬಳದಲ್ಲಿ ಮೊದಲ ಬಾರಿಗೆ ನೇಗಿಲು ಕಿರಿಯ ವಿಭಾಗದಲ್ಲಿ ಪದಾರ್ಪಣೆ ಮಾಡಿದ ಕುಟ್ಟಿ ಅಂದೇ ಪ್ರಶಸ್ತಿ ಮುಡಿಗೇರಿಸಿದ್ದ. ಮುಂದೆ 2009-10ರ ಸೀಸನ್ ನಲ್ಲಿ ಅಲೆವೂರು ಕುಟ್ಟಿ ಹಲವಾರು ಕಡೆ ಪ್ರಶಸ್ತಿ ಪಡೆದಿದ್ದ. ತಂಡಬೈಲ್ ನಾಗೇಶ್ ದೇವಾಡಿಗರು ಕುಟ್ಟಿಯನ್ನು ತಮ್ಮ ಬಳಗಕ್ಕೆ ಸೇರಿಸಿಕೊಂಡರು. ಅಲೆವೂರು ಕುಟ್ಟಿ ಅಲ್ಲಿಂದ ತಡಂಬೈಲ್ ಕುಟ್ಟಿಯಾದ.
ಕಾರ್ಕಳ ಜೀವನ್ ದಾಸ್ ಅಡ್ಯಂತಾಯ ಮತ್ತು ತಂಡಬೈಲ್ ನಾಗೇಶ್ ದೇವಾಡಿಗರ ಜಂಟಿ ತಂಡದಲ್ಲಿ ಮಿಂಚಿದ್ದು ಚಾಂಪಿಯನ್ ಕೋಣ ಮುಕೇಶ ಮತ್ತು ಕುಟ್ಟಿ. ನಾಲ್ಕೈದು ವರ್ಷಗಳ ಹಿಂದೆ ಮೂಡುಬಿದಿರೆ ಕಂಬಳದಲ್ಲಿ 144.5 ಮೀಟರ್ ದೂರವನ್ನು ಕೇವಲ 14.01 ಸೆಕೆಂಡ್ ನಲ್ಲಿ ಓಡಿ ಗುರಿ ತಲುಪಿದ್ದ ಕುಟ್ಟಿ ಮುಕೇಶ ಆ ಕಾಲದ ದಾಖಲೆ ನಿರ್ಮಿಸಿದ್ದರು.
ಕಂಬಳದಲ್ಲಿ ಮುಕೇಶ ಮತ್ತು ಕುಟ್ಟಿ ಓಡುವುದನ್ನು ಕಂಡರೆ ಪಾಪ ಪರಿಹಾ1ರವಾಗುವುದು, ಅಷ್ಟು ಚಂದದ ಓಟ ಅವುಗಳದ್ದು ಎನ್ನುವುದು ಅಭಿಮಾನಿಗಳ ಮಾತು. ಹಲವಾರು ಪ್ರಶಸ್ತಿ, ದಾಖಲೆಗಳು, ಅಭಿಮಾನಿಗಳನ್ನು ಸಂಪಾದಿಸಿದ್ದ ‘ಚಾಂಪಿಯನ್ ಕುಟ್ಟಿ’ ಇನ್ನು ನೆನಪು ಮಾತ್ರ.