KARNATAKA
ರೀಲ್ಸ್ ಶೋಕಿಯ ಯುವಕರಿಗೆ ಕಲಬುರಗಿ ಖಾಕಿ ಶಾಕ್..!
ಕಲಬುರಗಿ: ಸಿಕ್ಕ ಸಿಕ್ಕ ಮಾರಕಾಸ್ತ್ರ ಹಿಡಿದು ರೀಲ್‌ಗಳ ಮೂಲಕ ಹವಾ ಸೃಷ್ಟಿಸಲು ಯತ್ನಿಸುವ ಯುವಕರಿಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಲಬುರಗಿ ಖಾಕಿ ಶಾಕ್ ನೀಡಿದೆ.
ಒಂದು ತಿಂಗಳಲ್ಲಿ 9 ಪ್ರಕರಣಗಳನ್ನು ದಾಖಲಿಸಿ ಜೈಲಿಗಟ್ಟಿದೆ ಈ ಮೂಲಕ ಶೋಕಿವಾಲ ಯುವಕರಿಗೆ ಕಲಬುರಗಿ ಪೊಲೀಸರು ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ. ಸಿನಿಮಾದಲ್ಲಿ ವಿಲನ್‌ಗಳು ತೋರಿಸಿದಂತೆ ಗನ್ ಹಿಡಿದು ಶೌರ್ಯ ತೋರಿಸುವ ಹಾಗೂ ವಿಲನ್ ಡೈಲಾಗಳಿಗೆ ಲಿಪ್ ಸಿಂಕ್ ಮಾಡಿ ಗನ್ ತೋರಿಸುವ ಹಾಗೂ ಬರ್ತಡೆ ಪಾರ್ಟಿಯಲ್ಲಿ ಉದ್ದ ತಲ್ವಾರ್ ಸೇರಿ ಮಾರಕಾಸ್ತ್ರಗಳಿಂದ ಕೇಕ್ ಕತ್ತರಿಸುವ, ಕೈಯಲ್ಲಿ ಹಿಡಿದು ಮೈ ಮೇಲೆ ಹೋಶ್ ಇಲ್ಲದಂತೆ ಕುಣಿಯುವ ರೀಲ್ಸ್‌ಗಳಿಗೆ ಕಡಿವಾಣ ಹಾಕಲಾಗಿದೆ.ಸಾಮಾಜಿಕ ಜಾಲತಾಣದಲ್ಲಿಇಂದು ಹೆಚ್ಚಿನ ಬಳಕೆಯಲ್ಲಿರುವುದು ರೀಲ್ಸ್ ಆದ್ದರಿಂದ ಯುವಕರಿಗೆ ಈ ಗೀಳು ಆರಂಭವಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ರೀಲ್ಸ್ ನೋಡುತ್ತಿದ್ದಾರೆ. ಇಂತಹ ವೇಳೆ ಗನ್ ಸೇರಿ ಮಾರಕಾಸ್ತ್ರ ಹಿಡಿದ ರೀಲ್ಸ್‌ಗಳು ಮಕ್ಕಳ ಮುಂದೆ ಬಂದರೆ ಅವರ ಮನಸ್ಸಿಗೆ ಮಾರಕ ಶಸ್ತ್ರಗಳ ಬಗ್ಗೆ ವ್ಯಾಮೋಹ ಹೆಚ್ಚುತ್ತದೆ. ಮುಂದೆ ಅಪರಾಧ ಕೃತ್ಯಗಳಲ್ಲಿ ತೊಡಗಲು ಪ್ರೇರೇಪಣೆ ನೀಡುತ್ತದೆ. ಆದ್ದರಿಂದ ಇವುಗಳ ಬಗ್ಗೆ ಕಡಿವಾಣ ಅಗತ್ಯ ಎಂದು ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಕ್ಷಯ್ ಹಾಕೆ ಹೇಳಿದ್ದಾರೆ, ಜಿಲ್ಲೆಯ ನಾನಾ ಠಾಣೆಗಳಲ್ಲಿ ಒಂಭತ್ತು ಪ್ರಕರಣ ದಾಖಲಾಗಿದೆ. ಜಿಲ್ಲೆಯ ಸೇಡಂನಲ್ಲಿ ಎರಡು, ಚಿಂಚೋಳಿ, ಅಫಜಲಪುರ, ವಾಡಿ, ಜೇವರ್ಗಿ, ಯಡ್ರಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಸ್ತ್ರಾಸ್ತ್ರ ಹಿಡಿದು ರೀಲ್ಸ್ ಮಾಡಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗಿದೆ.ಮಾರಕಾಸ್ತ್ರ ಹಿಡಿದುಕೊಂಡು ರೀಲ್ಸ್‌ಗಳನ್ನು ಮಾಡುವುದರಿಂದ ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಆದ್ದರಿಂದ ಯುವಕರು ಇಂತಹ ರೀಲ್‌ಗಳಿಂದ ದೂರ ಇರಬೇಕೆಂದು ಎಚ್ಚರಿಕೆ ನೀಡಿದ್ದಾರೆ.