LATEST NEWS
ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಬಂದ ಮೂರೇ ದಿನಕ್ಕೆ ಜನ ಸಾವನಪ್ಪುತ್ತಿದ್ದಾರೆ – ಖಾದರ್

ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಬಂದ ಮೂರೇ ದಿನಕ್ಕೆ ಜನ ಸಾವನಪ್ಪುತ್ತಿದ್ದಾರೆ – ಖಾದರ್
ಮಂಗಳೂರು ಮೇ.16: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಬಂದ ಮೂರೇ ದಿನದಲ್ಲಿ ಜನ ಸಾಯುತ್ತಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ಜನರ ಆರೋಗ್ಯ ಜಿಲ್ಲೆಯ ಜನಪ್ರತಿನಿಧಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ತಮಾಷೆಯ ವಿಷಯವಾಗಿದೆ ಎಂದು ಆರೋಪಿಸಿದ ಅವರು ಜಿಲ್ಲಾಡಳಿತವು ವೈರಸ್ ತಡೆಯಲು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಒಬ್ಬ ಸೋಂಕಿತ ಸಾವನ್ನಪ್ಪಿದರೆ 150 ಜನರಿಗೆ ಸೋಂಕು ತಗುಲುತ್ತದೆ. ಇದು ವೈದ್ಯಕೀಯ ಅಧ್ಯಯನದಿಂದ ದೃಢಪಟ್ಟಿದೆ. ದ.ಕ ಜಿಲ್ಲೆಯ ಕೊರೊನಾ ಮೂಲವನ್ನೇ ಪತ್ತೆ ಹಚ್ಚಲು ಆಗಲಿಲ್ಲ. ಯಾವುದೇ ವಿಚಾರದ ಬಗ್ಗೆ ಜಿಲ್ಲಾಡಳಿತದಲ್ಲಿ ಸ್ಪಷ್ಟತೆ ಇಲ್ಲ. ಜನರಿಗೆ ಕಿಟ್ ಕೊಡುವುದರಿಂದ ವೈರಸ್ ಹೋಗುವುದಿಲ್ಲ. ಜಿಲ್ಲಾಡಳಿತವು ವೈರಸ್ ನಿಯಂತ್ರಣಕ್ಕೆ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಂದೇ ಭಾರತ್ ಮಿಷನ್‌ನಲ್ಲಿ ಮಂಗಳೂರು ವಿಮಾನ ನಿಲ್ದಾಣ ನಿರ್ಲಕ್ಷ್ಯವಾಗಿದೆ. ಡಿ.ವಿ.ಸದಾನಂದ ಗೌಡರ ಮುತುವರ್ಜಿಯಿಂದ ಕೇವಲ ಒಂದೇ ವಿಮಾನ ಬಂದಿದೆ. ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಹತ್ತಾರು ವಿಮಾನ ಬರುತ್ತಿದೆ. ಯಾವುದೇ ರಾಷ್ಟ್ರದಿಂದ ಮಂಗಳೂರಿಗೆ ವಿಮಾನ ಬರುತ್ತಿಲ್ಲ.ಈ ಕೆಲಸವನ್ನು ದ.ಕ ಸಂಸದರಿಗೆ ಕೂತಲ್ಲಿಯೇ ಮಾಡಬಹುದು. ಆದರೆ ಸಂಸದ ಕಟೀಲ್ ಕಿಟ್ ಕೊಡುವುದರಲ್ಲಿ ಬ್ಯುಸಿ ಇದ್ದಾರೆ. ಕಾರ್ಪೋರೆಟರ್ ಮಾಡುವ ಕೆಲಸವನ್ನು ಸಂಸದರು ಮಾಡುತ್ತಿದ್ದಾರೆ. ಮಂಗಳೂರಿಗೆ ವಿಮಾನ ಕಡಿಮೆ ಸಂಖ್ಯೆಯಲ್ಲಿ ಬಂದರೆ ಅದಕ್ಕೆ ಸಂಸದರ ನಿರ್ಲಕ್ಷ್ಯ ವೇ ಕಾರಣ ಎಂದು ಆರೋಪಿಸಿದ್ದಾರೆ.