DAKSHINA KANNADA
ಕಡಬ: ರೆಂಜಿಲಾಡಿಯಲ್ಲಿ ಮತ್ತೆ 2 ಕಾಡಾನೆ ಪ್ರತ್ಯಕ್ಷ…

ಕಡಬ, ಮೇ 16: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರಂಜಿಲಾಡಿಯಲ್ಲಿ ಜನವಸತಿ ಪ್ರದೇಶದ ಅರಣ್ಯ ಭಾಗದಲ್ಲಿ ಎರಡು ಕಾಡಾನೆಗಳು ಕಾಣಿಸಿಕೊಂಡಿವೆ.
ರೆಂಜಿಲಾಡಿ ಗ್ರಾಮದ ಕಾನದಬಾಗಿಲಿನಲ್ಲಿ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ರವಿವಾರ ಸಂಜೆ ಆನೆಯೊಂದಿಗೆ ದೊಡ್ಡ ಆನೆ ಸಂಚರಿಸುತ್ತಿರುವುದನ್ನು ಸ್ಥಳೀಯರು ಕಂಡಿರುವುದಾಗಿ ತಿಳಿಸಿದ್ದಾರೆ. ಇದೇ ಪರಿಸರದಲ್ಲಿ ಕಾಡಾನೆ ದಾಳಿಗೆ ಇಬ್ಬರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೆ ಆನೆಗಳು ಪ್ರತ್ಯಕ್ಷವಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಮರಿಯಾನೆಯೊಂದು ತಾಯಿ ಆನೆಯ ಜೊತೆ ಸಾಗುತ್ತಿರುವ ವೀಡಿಯೋವನ್ನು ಸ್ಥಳೀಯರೇ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.