LATEST NEWS
ಈ ಗ್ರಾಮದಲ್ಲಿ ಜೀನ್ಸ್ ಹಾಕಿದ್ರೆ ಊರಿಂದ ಬಹಿಷ್ಕಾರ..!
ಲಖನೌ, ಮಾರ್ಚ್ 11 : ಗ್ರಾಮಗಳಲ್ಲಿ ಚಿತ್ರ ವಿಚಿತ್ರ ನಿಯಮಗಳನ್ನು ಮಾಡಿಕೊಂಡು ಅದರ ಪರಿಪಾಲನೆ ಮಾಡುವುದನ್ನು ನೋಡಿರುತ್ತೀರಿ. ಇಲ್ಲೊಂದು ಗ್ರಾಮ ಪಂಚಾಯಿತಿಯಲ್ಲಿ ಮಾಡಿರುವ ನಿಯಮದಿಂದಾಗಿ ಗ್ರಾಮದ ಯುವಕ-ಯುವತಿಯರು ತಲೆ ಕೆಡಿಸಿಕೊಂಡು ಬಿಟ್ಟಿದ್ದಾರೆ.
ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯ ಖಾಪ್ ಗ್ರಾಮ ಪಂಚಾಯಿತಿ ಒಂದು ಹೊಸ ರೀತಿಯ ನಿಯಮ ಜಾರಿ ಮಾಡಿದೆ. ಗ್ರಾಮದಲ್ಲಿ ಯಾವೊಬ್ಬ ಮಹಿಳೆ ಅಥವಾ ಯುವತಿಯು ಜೀನ್ಸ್ ಪ್ಯಾಂಟ್, ಸ್ಕರ್ಟ್ ಧರಿಸುವಂತಿಲ್ಲ. ಹಾಗೆಯೇ ಗಂಡು ಮಕ್ಕಳು ಶಾರ್ಟ್ಸ್ ಹಾಕಿಕೊಳ್ಳುವಂತಿಲ್ಲ. ಹಾಗೊಂದು ವೇಳೆ ನಿಯಮ ಮೀರಿ ಹಾಕಿಕೊಂಡಿದ್ದೇ ಆದಲ್ಲಿ ಅವರನ್ನು ಗ್ರಾಮದಿಂದ ಬಹಿಷ್ಕರಿಸಲಾಗುವುದು ಎನ್ನುವ ನಿಯಮವನ್ನು ಗ್ರಾಮ ಪಂಚಾಯಿತಿ ಮಾಡಿದೆ.
ಈ ನಿಯಮ ಮಕ್ಕಳಿಗೆ ಇರುವುದಿಲ್ಲ. ವಯಸ್ಕರು ಯಾವುದೇ ಕಾರಣಕ್ಕೂ ಮೊಣಕಾಲಿಗಿಂತ ಮೇಲೆ ಬರುವ ಬಟ್ಟೆಗಳನ್ನು ಧರಿಸವಂತಿಲ್ಲ. ಈ ವಿಚಾರವವಾಗಿ ಶಾಲೆಗಳ ಆಡಳಿತದೊಂದಿಗೂ ಮಾತನಾಡಿರುವುದಾಗಿ ತಿಳಿಸಲಾಗಿದೆ.
ಬಹಿಷ್ಕಾರದ ಉದ್ದೇಶ: ಜೀನ್ಸ್, ಶಾರ್ಟ್ಸ್, ಸ್ಕರ್ಟ್ ಎಲ್ಲ ನಮ್ಮ ಸಂಸ್ಕೃತಿಯಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯಿಂದ ನಮ್ಮ ಸಮಾಜ ಹಾಳಾಗುತ್ತಿದೆ. ಹಾಗಾಗಿ ಗ್ರಾಮ ಪಂಚಾಯಿತಿ ಸದಸ್ಯರೆಲ್ಲ ಚರ್ಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಕಿಸಾಣ್ ಸಂಘಟನೆ ಅಧ್ಯಕ್ಷ ಠಾಕೂರ್ ಪುರಾಣ್ ಸಿಂಗ್ ತಿಳಿಸಿದ್ದಾರೆ. ಈ ಕುರಿತಾಗಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ಗೆ ಮಾಹಿತಿ ತಲುಪಿದ್ದು, ತನಿಖೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.