Connect with us

DAKSHINA KANNADA

ದಕ್ಷಿಣ ಕಾಶಿ ಉಪ್ಪಿನಂಗಡಿಯಲ್ಲಿ ಮಖೆ‌ ಶಿವರಾತ್ರಿ – ಕೊರೊನಾ ಮಹಾಮಾರಿ ಕಳೆಯಲು ಭಕ್ತರಿಂದ ಮಖೆ ತೀರ್ಥಸ್ನಾನ…..

ಪುತ್ತೂರು ಮಾರ್ಚ್ 11: ದೇಶದೆಲ್ಲೆಡೆ ಇಂದು ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸಹಸ್ತ್ರಲಿಂಗೇಶ್ವರ ದೇವಸ್ಥಾನದಲ್ಲೂ ಶಿವರಾತ್ರಿಯ ವಿಶೇಷ ಮಖೆ ಜಾತ್ರೆ ಆರಂಭಗೊಂಡಿದೆ. ನೇತ್ರಾವತಿ ಹಾಗೂ ಕುಮಾರಧಾರ ನದಿಗಳ ಸಂಗಮ ಕ್ಷೇತ್ರದ ಉದ್ಭವಲಿಂಗಕ್ಕೆ ಭಕ್ತರೇ ಅಭಿಷೇಕ ಮಾಡುವುದು ಇಲ್ಲಿನ ವಿಶೇಷತೆ.

ನೇತ್ರಾವತಿ ನದಿ ಹಾಗೂ ಕುಮಾರಧಾರಾ ನದಿಗಳು ಸಂಗಮವಾಗುವ ಸ್ಥಳದಲ್ಲಿ ಈ ಉದ್ಭವಲಿಂಗವಿದ್ದು, ಶಿವರಾತ್ರಿಯ ಸಂದರ್ಭದಲ್ಲಿ ನದಿಯ ಮರಳನ್ನು ಸರಿಸಿ ಉದ್ಭವಲಿಂಗವನ್ನು ಭಕ್ತಾಧಿಗಳ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ನೇತ್ರಾವತಿ ನದಿ ನೀರು,ಹಾಲು ಹಾಗೂ ಸೀಯಾಳಾಭಿಷೇಕವನ್ನು ಈ ಶಿವಲಿಂಗಕ್ಕೆ ಮಾಡುವ ಮೂಲಕ ಭಕ್ತಾಧಿಗಳು ಮಹಾಶಿವನ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ನೇತ್ರಾವತಿ ನದಿಯಲ್ಲಿ ಸಂಪೂರ್ಣ ಮುಳುಗಡೆಯಾಗಿರುವ ಈ ಉದ್ಭವ ಲಿಂಗವನ್ನು ಮಖೆ ಜಾತ್ರೆ ಸಂದರ್ಭದಲ್ಲಿ ಈ ಲಿಂಗದ ಮೇಲೆ ತುಂಬಿರುವ ಮರಳನ್ನು ಸರಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.

ಕೊರೊನಾ ಎನ್ನುವ ಮಹಾಮಾರಿ ಇಡೀ ವಿಶ್ವವನ್ನೇ ಆತಂಕಕ್ಕೀಡು ಮಾಡಿದೆ. ಮಹಾಮಾರಿಯಿಂದ ಭಕ್ತರನ್ನು ರಕ್ಷಿಸಲು ಶಿವನೊಬ್ಬನಿಂದಲೇ ಸಾಧ್ಯ ಎನ್ನುವುದು ಭಕ್ತರ ನಂಬಿಕೆ. ಈ ಕಾರಣಕ್ಕಾಗಿ ಈ ಬಾರಿ ಶಿವನಿಗೆ ಜಲ,ಕ್ಷೀರ ಹಾಗೂ ಸಿಯಾಳಾಭಿಷೇಕದ ಜೊತೆಗೆ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳ ಸಂಗಮ ಸ್ಥಳದಲ್ಲಿ ತೀರ್ಥಸ್ನಾನವನ್ನೂ ಭಕ್ತರು ಮಾಡುತ್ತಿದ್ದಾರೆ.

ಅಲ್ಲದೆ ಇತರ ದೇವಸ್ಥಾನಗಳಂತೆ ದೇವರನ್ನು ದೂರದಿಂದಲೇ ನೋಡಬೇಕಾದ ಪದ್ಧತಿಯೂ ಈ ಕ್ಷೇತ್ರದಲ್ಲಿಲ್ಲ. ಉದ್ಭವಲಿಂಗಕ್ಕೆ ತಾವೇ ಅಭಿಷೇಕ ಮಾಡುವ ಮೂಲಕ ದೇವರನ್ನು ಹತ್ತಿರದಿಂದಲೇ ಬೇಡುವ ಭಕ್ತಾಧಿಗಳು ಇಲ್ಲಿ ಭಕ್ತಿಯಿಂದ ಪುಳಕಿತರಾಗುತ್ತಿದ್ದಾರೆ. ಊರ ಹಾಗೂ ಪರವೂರಿನಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಇಲ್ಲಿ ಆಗಮಿಸುತ್ತಿದ್ದು, ಶಿವರಾತ್ರಿಯಂದು ಕ್ಷೇತ್ರದಲ್ಲಿ ವಿಶೇಷ ಪೂಜೆಯೂ ನೆರವೇರುತ್ತದೆ.

ವರ್ಷಕ್ಕೆ ಮೂರು ಬಾರಿ ಸಹಸ್ತ್ರಲಿಂಗೇಶ್ವರ ದೇವಸ್ಥಾನದಲ್ಲಿ ಮಖೆ ಜಾತ್ರೆ ನಡೆಯುತ್ತದೆ. ಆದರೆ ಮಾಘ ಮಾಸದ ಶಿವರಾತ್ರಿಯಂದು ನಡೆಯುವ ಮಖೆ ಜಾತ್ರೆಗೆ ವಿಶೇಷ ಮಹತ್ವವೂ ಇಲ್ಲಿದೆ.