DAKSHINA KANNADA
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜೆಸಿಬಿ ಗಲಾಟೆ – ಏನಿದು ವಿವಾದ
ಪುತ್ತೂರು ನವೆಂಬರ್ 30: ಕಳೆದೆರಡು ದಿನಗಳಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ದುಡಿಯುತ್ತಿರುವ ಹೊರ ಜಿಲ್ಲೆಗಳ ಜೆಸಿಬಿ ಆಪರೇಟರ್ ಗಳ ವಿರುದ್ಧ ಸದ್ದಿಲ್ಲದೆ ದೌರ್ಜನ್ಯಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಬೇರೆ ಜಿಲ್ಲೆಯ ಆಪರೇಟರ್ ಗಳು, ಜೆಸಿಬಿ ಮಾಲಕರು ದುಡಿಯಬಾರದು ಎನ್ನುವ ಫರ್ಮಾನನ್ನು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರಯವ ಜೆಸಿಬಿ ಆಪರೇಟರ್ ಗಳ ಸಂಘ ನೀಡಿದೆ. ಈಗಾಗಲೇ ಎರಡು ಹೊರ ಜಿಲ್ಲೆಯ ಜೆಸಿಬಿ ಗಳನ್ನು ಬೇರೆ ಜಿಲ್ಲೆಗೆ ಒತ್ತಾಯಪೂರ್ವಕವಾಗಿ ಹಿಂದಕ್ಕೆ ಕಳುಹಿಸಲಾಗಿದ್ದು, ಇತರ ಜಿಲ್ಲೆಗಳ ಕಾರ್ಮಿಕರು ಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೃಷಿ ಹಾಗು ಇತರ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಲು ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಜೆಸಿಬಿ ಮತ್ತು ಅವುಗಳ ಕಾರ್ಮಿಕರು ಆಗಮಿಸಿ ದುಡಿಯುತ್ತಿದ್ದಾರೆ. ಈ ಪ್ರಕ್ರಿಯೆ ಕಳೆದ ಹಲವು ವರ್ಷಗಳಿಂದ ಹೀಗೆಯೇ ನಡೆದುಕೊಂಡು ಬರುತ್ತಿದ್ದು, ಇತ್ತೀಚಿನ ಕೆಲವು ದಿನಗಳಿಂದ ಹೊರ ಜಿಲ್ಲೆಯ ಜೆಸಿಬಿಗಳು ಮತ್ತು ಅದರ ಕಾರ್ಮಿಕರು ದಕ್ಷಿಣಕನ್ನಡ ಜಿಲ್ಲೆಯಲ್ಲಿ ದುಡಿಯಬಾರದು ಎನ್ನುವ ಅನಧಿಕೃತ ಫರ್ಮಾನನ್ನು ಹೊರಡಿಸಲಾಗಿದೆ. ಹೊರ ಜಿಲ್ಲೆಗಳ ಜೆಸಿಬಿ ಕಾರ್ಮಿಕರಿಂದ ತಮಗೆ ತೊಂದರೆಯಾಗುತ್ತಿದೆ ಎನ್ನುವ ಕಾರಣವನ್ನು ನೀಡಿ ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲೇ ನೆಲೆಸಿ ದುಡಿಯುತ್ತಿರಯವ ಕಾರ್ಮಿಕರ ಮೇಲೆ ದೌರ್ಜನ್ಯ ಆರಂಭವಾಗಿದೆ. ಈಗಾಗಲೇ ಎರಡು ಜೆಸಿಬಿ ಮತ್ತು ಅದರ ಕಾರ್ಮಿಕರು ಕಾರು,ಜೀಪು,ಬೈಕುಗಳಲ್ಲಿ ತಂದ ತಂಡ ಜಿಲ್ಲೆಯಿಂದ ಒತ್ತಾಯಪೂರ್ವಕ ಹೊರದೂಡಿದೆ. ಅಲ್ಲದೆ ಕಾರ್ಮಿಕರಿಗೆ ದೂರವಾಣಿ ಕರೆ ಮಾಡಿ ಜೀವ ಬೆದರಿಕೆಯನ್ನೂ ನೀಡಲಾಗುತ್ತಿದ್ದು, ಈ ಸಂಬಂಧ ದಕ್ಷಿಣಕನ್ನಡ ಜಿಲ್ಲಾ ಪೋಲೀಸರಿಗೆ ದೂರಮ್ನೂ ನೀಡಲಾಗಿದೆ. ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಜೆಸಿಬಿ ಅಪರೇಟರ್ ಗಳ ಸಂಘವೊಂದು ಈ ಕೃತ್ಯದಲ್ಲಿ ತೊಡಗಿಕೊಂಡಿದೆ ಎನ್ನುವ ಆರೋಪವನ್ನು ಹೊರ ಜಿಲ್ಲೆಗಳ ಜೆಸಿಬಿ ಆಪರೇಟರ್ ಗಳು ಮಾಡುತ್ತಿದ್ದಾರೆ.
ಜೆಸಿಬಿ ದರಕ್ಕೆ ಸಂಬಂಧಪಟ್ಟಂತೆ ಈ ದೌರ್ಜನ್ಯ ಆರಂಭವಾಗಿದೆ ಎನ್ನಲಾಗಿದ್ದು, ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಸಂಘ ಎಲ್ಲಾ ಆಪರೇಟರ್ ಗಳು ತಮ್ಮ ಸಂಘ ನಿಗದಿಪಡಿಸಿದ ದರದಲ್ಲೇ ಕೆಲಸ ಮಾಡಬೇಕೆಂದು ಆದೇಶ ಮಾಡಿದೆ. ಆದರೆ ಈ ಆದೇಶದ ಹೊರತಾಗಿ ಇತರ ಜಿಲ್ಲೆಗಳಿಂದ ಬಂದ ಜೆಸಿಬಿಗಳು ಕಡಿಮೆ ದರದಲ್ಲಿ ಕೆಲಸ ನಿರ್ವಹಿಸುತ್ಗಿರುವುದು ಜಿಲ್ಲೆಯ ಸಂಘದ ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನೇ ಅಸ್ತ್ರವನ್ನಾಗಿ ಬಳಸಿ ಇದೀಗ ಜಿಲ್ಲೆಯ ಜೆಸಿಬಿ ಆಪರೇಟರ್ ಗಳ ಸಂಘದ ಸದಸ್ಯರು ಹೊರ ಜಿಲ್ಲೆಯ ಅಪರೇಟರ್ ಗಳ ವಿರುದ್ಧ ದೌರ್ಜನ್ಯ ಆರಂಭಿಸಿದ್ದಾರೆ. ಅವರು ಕೆಲಸ ನಿರ್ವಹಿಸುವ ಸ್ಥಳಕ್ಕೆ ಹೋಗಿ ಬೆದರಿಸುವ, ಅವ್ಯಾಚ್ಯ ಶಬ್ದಗಳಿಂದ ಬೈಯುವ ಕಾರ್ಯವನ್ನು ಆರಂಭಿಸಿರುವುದು ಕಾರ್ಮಿಕರ ಆತಂಕಕ್ಕೆ ಕಾರಣವಾಗಿದೆ.
ಹೊರ ಜಿಲ್ಲೆಯ ಕಾರ್ಮಿಕರನ್ನು ಹೊರದಬ್ಬುವ ಈ ಫರ್ಮಾನಿನ ವಿರುದ್ಧ ರಾಜ್ಯ ಗೃಹ ಇಲಾಖೆಗೂ ದೂರು ನೀಡಲಾಗಿದೆ. ಇದೇ ರೀತಿಯ ವರ್ತನೆ ರಾಜ್ಯದೆಲ್ಲೆಡೆ ಪ್ರಾರಂಭವಾದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೂ ಧಕ್ಕೆಯಾಗಲಿದ್ದು, ಸಂಬಂದಪಟ್ಟ ಇಲಾಖೆಗಳು ಈ ಬಗ್ಗೆ ಸೂಕ್ತ ಗಮನಹರಿಸಬೇಕೆಂಬ ಒತ್ತಾಯಗಳೂ ಕೇಳಿ ಬರಲಾರಂಭಿಸಿದೆ.