LATEST NEWS
ನನ್ನ ಮಾತುಗಳನ್ನು ಹೆಕ್ಕಿ, ಕಪೋಲಕಲ್ಪಿತವಾಗಿ ತಿರುಚಿ ಯಾರದೋ ಹೆಸರಿಗೆ ಜೋಡಿಸುವ ಕೆಟ್ಟ ಚಾಳಿಯನ್ನು ನಿಲ್ಲಿಸಿ – ಜಯಪ್ರಕಾಶ್ ಹೆಗ್ಡೆ
ಉಡುಪಿ ಮಾರ್ಚ್ 24: ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಯಪ್ರಕಾಶ್ ಹೆಗ್ಡೆ ನಡುವೆ ನಡೆಯುತ್ತಿದ್ದ ಭಾಷಾ ಜ್ಞಾನದ ಕುರಿತ ವಿವಾದಕ್ಕೆ ಜಯಪ್ರಕಾಶ್ ಹೆಗ್ಡೆ ವಿರಾಮ ಹಾಕಿದ್ದು, ನಾನು ಯಾರ ವಿರುದ್ದವೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು, ಭಾಷಾ ಜ್ಞಾನದ ಕುರಿತಂತೆ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಕುರಿತು ಯಾವುದೇ ಮಾತನ್ನು ಆಡಲಿಲ್ಲ ಎಂದು ಚಿಕ್ಕ ಮಗಳೂರು – ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.
ಅಭ್ಯರ್ಥಿಗಳ ಕುರಿತು ಭಾಷಾ ಕದನ ಎನ್ನುವ ಮಾಧ್ಯಮ ವರದಿಗಳ ಕುರಿತು ಪ್ರತಿಕ್ರಿಯಿಸಿರುವ ಅವರು, ಬ್ರಹ್ಮಾವರದ ಕಾರ್ಯಕ್ರಮ ವೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಲೋಕಸಭೆ ಯಲ್ಲಿ ಭಾಷಾಂತರಕಾರರು ಇರುವುದರಿಂದ ಕನ್ನಡ ದಲ್ಲಿಯೂ ಮಾತನಾಡಬಹುದು. ಆದರೆ, ಅಧಿಕಾರಿಗಳು ಹಾಗೂ ಕಚೇರಿಗಳಲ್ಲಿ ಕೆಲಸ ಮಾಡುವಾಗ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳ ಜ್ಞಾನ ಬೇಕಾಗುತ್ತದೆ ಎಂದಿದ್ದೆ. ಒಬ್ಬ ಸಂಸದನಾಗಿ ಸೇವೆ ಸಲ್ಲಿಸಿದ ಅನುಭವದ ಆಧಾರದಲ್ಲಿ ಇದನ್ನು ಹೇಳಿದ್ದೇನೆಯೇ ಹೊರತು ಯಾರನ್ನೂ ಉದ್ದೇಶಿಸಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನನ್ನ ಮಾತುಗಳನ್ನು ಹೆಕ್ಕಿ, ಕಪೋಲಕಲ್ಪಿತವಾಗಿ ತಿರುಚಿ ಯಾರದೋ ಹೆಸರಿಗೆ ಜೋಡಿಸುವ ಕೆಟ್ಟ ಚಾಳಿಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ರಾಜಕೀಯ ಜೀವನದಲ್ಲಿ ಹಲವು ಚುನಾವಣೆಗಳನ್ನು ಎದುರಿಸಿರುವ ನಾನು, ಎಲ್ಲ ಚುನಾವಣೆಯನ್ನು ಸೈದ್ದಾಂತಿಕ ನೆಲೆಯ ಲ್ಲಿಯೇ ಎದುರಿಸಿದ್ದೇನೆ. ಎದುರಾಳಿಗಳನ್ನು ಸೌಜನ್ಯಯುತವಾಗಿ ಹಾಗೂ ಗೌರವದಿಂದ ಕಂಡಿದ್ದೇನೆ. ಅಪಪ್ರಚಾರ ಹಾಗೂ ಸುಳ್ಳು ವದಂತಿಗಳನ್ನು ಮಾಡಿಲ್ಲ, ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ನನ್ನ ಸೇವೆ ಮತ್ತು ಜನಪ್ರತಿನಿಧಿಯೊಬ್ಬರಿಗೆ ಇರುವ ಬದ್ದತೆಯಡಿಯಲ್ಲಿ ನಾನು ಚುನಾವಣೆಗಳನ್ನು ಎದುರಿಸಿದ್ದೇನೆ ಎಂದು ಹೆಗ್ಡೆ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.