LATEST NEWS
ಸಂಪ್ರದಾಯ ಹೆಸರಲ್ಲಿ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶ ತಡೆದರೆ ದೇಶ ನರಕವಾಗುತ್ತದೆ – ಜಯಮಾಲಾ

ಸಂಪ್ರದಾಯ ಹೆಸರಲ್ಲಿ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶ ತಡೆದರೆ ದೇಶ ನರಕವಾಗುತ್ತದೆ – ಜಯಮಾಲಾ
ಮಂಗಳೂರು ಜುಲೈ 23: ಸಂಪ್ರದಾಯದ ಹೆಸರಲ್ಲಿ ದೇವಸ್ಥಾನಕ್ಕೆ ಮಹಿಳೆಯರು ಹೋಗುವುದನ್ನು ತಡೆದರೆ ದೇಶ ನರಕವಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಶಬರಿ ಮಲೆಗೆ ಮಹಿಳೆಯ ಪ್ರವೇಶದ ಕುರಿತು ಮಾತನಾಡಿ ಜಗತ್ತಿನಲ್ಲಿ ಗಂಡಿಗೊಂದು, ಹೆಣ್ಣಿಗೊಂದು ಪ್ರತ್ಯೇಕ ದೇವರು ಸೃಷ್ಟಿಯಾಗಿಲ್ಲ. ಸಂಪ್ರದಾಯದ ಹೆಸರಿನಲ್ಲಿ ದೇವಸ್ಥಾನಕ್ಕೆ ಹೆಣ್ಣುಮಕ್ಕಳು ಹೋಗುವುದನ್ನು ತಡೆದರೆ ದೇಶ ನರಕವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ರಾಜ್ಯದಲ್ಲಿ ಮಹಿಳೆಯರು ನೆಮ್ಮದಿಯ ಜೀವನ ನಡೆಸುವಂತಾಗಬೇಕು. ತಾರತಮ್ಯ ಹೋಗಲಾಡಿಸಬೇಕು ಎನ್ನುವುದು ನನ್ನ ಕನಸು ಎಂದು ಅವರು ಆಭಿಪ್ರಾಯ ಪಟ್ಟರು. ರಾಜ್ಯದಲ್ಲಿ ಸಾಂಸ್ಕೃತಿಕ ನೀತಿ ರೂಪಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ. ಸಾಂಸ್ಕೃತಿಕ ನೀತಿ ರೂಪಿಸುವ ಬಗ್ಗೆ ಪರ- ವಿರೋಧ ಅಭಿಪ್ರಾಯಗಳಿವೆ. ಈ ಎಲ್ಲ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಾಂಸ್ಕೃತಿಕ ನೀತಿ ರೂಪಿಸಲಾಗುವುದು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನಕ್ಕೆ ಬರುವ ಅಕಾಡೆಮಿಗಳಿಗೆ ಈವರೆಗೆ 1 ಕೋಟಿ ರು. ಅನುದಾನ ನೀಡಲಾಗುತ್ತಿತ್ತು. ಇದೀಗ ಎಲ್ಲ ಅಕಾಡೆಮಿಗಳ ಅನುದಾನವನ್ನು 10 ಲಕ್ಷ ರೂಪಾಯಿ ಏರಿಕೆ ಮಾಡಲಾಗಿದೆ. ಮುಂದೆ ಅಕಾಡೆಮಿಗಳ ಕೆಲಸಗಳ ದಾಖಲೀಕರಣ ಕಾರ್ಯಕ್ಕೂ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.