LATEST NEWS
100 ಮಹಿಳೆಯರ ಅತ್ಯಾಚಾರಗೈದ ಜಿಲೇಬಿ ಬಾಬಾಗೆ 14 ವರ್ಷ ಶಿಕ್ಷೆ!
ಫತೇಹಬಾದ್, ಜನವರಿ 11: 100ಕ್ಕೂ ಹೆಚ್ಚು ಮಹಿಳೆಯರ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ ಜಿಲೇಬಿ ಬಾಬಾನಿಗೆ ಹರ್ಯಾಣದ ಜಿಲ್ಲಾ ನ್ಯಾಯಾಲಯ 14 ವರ್ಷ ಜೈಲು ಶಿಕ್ಷೆ ನೀಡಿ ಆದೇಶಿಸಿದೆ.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಬಲ್ವಂತ್ ಸಿಂಗ್ ಮಂಗಳವಾರ ಪೋಕ್ಸೋ ಕಾಯ್ದೆಯಡಿ 14 ವರ್ಷ, ಐಟಿ ಕಾಯ್ದೆ ಅಡಿಯಲ್ಲಿ 5 ವರ್ಷ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಒಟ್ಟಾಗಿ 14 ವರ್ಷ ಶಿಕ್ಷೆ ವಿಧಿಸಿ ಆದೇಶ ನೀಡಿದರು. ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದು, ಅವರ ಅಶ್ಲೀಲ ವಿಡಿಯೊ ಸೆರೆ ಹಿಡಿಯುವುದು 63 ವರ್ಷದ ಜಿಲೇಬಿ ಬಾಬಾ ಅಲಿಯಾಸ್ ಅಮರವೀರ್‌ನ ನಿತ್ಯದ ಕಾಯಕವಾಗಿತ್ತು. ವಿಡಿಯೊ ಬಳಸಿಕೊಂಡು ಮಹಿಳೆಯರನ್ನು ಬ್ಲ್ಯಾಕ್‌ಮೇಲ್ ಮಾಡಿ ಶೋಷಿಸುತ್ತಿದ್ದ.
ನಾಲ್ವರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳ ತಂದೆಯಾಗಿದ್ದ ಈತನ ಪತ್ನಿ ನಿಧನರಾಗಿದ್ದರು. ಮೂಲತಃ ಪಂಜಾಬ್‌ನವನಾದ ಈತ 23 ವರ್ಷಗಳ ಹಿಂದೆ ಮನ್ಸಾ ಪಟ್ಟಣದಿಂದ ತೋಹನಾಕ್ಕೆ ಬಂದು ಜಿಲೇಬಿ ಅಂಗಡಿ ತೆರೆದು ಪ್ರಸಿದ್ಧನಾಗಿದ್ದ.
ಕೆಲವು ವರ್ಷಗಳ ಬಳಿಕ ತೋಹನಾದಿಂದಲೂ ನಾಪತ್ತೆಯಾಗಿ ದೇವಸ್ಥಾನವೊಂದನ್ನು ಕಟ್ಟಿ ಬಾಬಾ ಅವತಾರದಲ್ಲಿ ಮರಳಿದ್ದ. ಅಲ್ಲಿಂದ ನಂತರ ಸಾಕಷ್ಟು ಮಹಿಳಾ ಅನುಯಾಯಿಗಳನ್ನು ಸಂಪಾದಿಸಿದ್ದ. ದೇವಸ್ಥಾನದ ಒಳಗೆ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆತನ ವಿರುದ್ಧ 2018ರಲ್ಲಿ ಮೊದಲು ದೂರು ದಾಖಲಾಗಿತ್ತು. ಆದರೆ ಜಾಮೀನು ಪಡೆದುಕೊಂಡು ಬಚಾವ್ ಆಗಿದ್ದ.
ಹರ್ಯಾಣದ ಫತೇಹಬಾದ್‌ನ ಜಿಲೇಬಿ ಬಾಬಾ ಅಮರ್ ರ್ಪುರಿ ‘ಬಿಲ್ಲು’ ಎಂದು ಜನಪ್ರಿಯನಾಗಿದ್ದ. ಈತ ಚಿತ್ರೀಕರಿಸಿದ್ದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಬಳಿಕ ಈತನ ವಿರುದ್ಧ 2019ರ ಜುಲೈ 19ರಂದು ತೋಹನಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಬೆನ್ನತ್ತಿದ್ದ ಪೊಲೀಸರಿಗೆ ಈತನ ಕರಾಳ ಮುಖದ ಅನಾವರಣವಾಗಿತ್ತು. 120 ವಿಡಿಯೋ ತುಣುಕುಗಳು ಇವನ ಮೊಬೈಲ್‌ನಲ್ಲಿತ್ತು. ಪ್ರತಿಯೊಂದು ವಿಭಿನ್ನ ಸಂತ್ರಸ್ತೆಯರದ್ದಾಗಿದ್ದವು. ತನ್ನ ಮೊಬೈಲ್ ಫೋನ್‌ನಲ್ಲಿ ಎಲ್ಲವನ್ನೂ ಚಿತ್ರೀಕರಿಸಿಟ್ಟುಕೊಂಡಿದ್ದ.