LATEST NEWS
ಐವನ್ ಡಿಸೋಜಗೆ ಕೊರೊನಾ ದೃಢ ; ಕ್ವಾರಂಟೈನ್ ಆಗ್ತಾರಾ ಡಿಕೆಶಿ, ಕಾಂಗ್ರೆಸ್ ನಾಯಕರು !!

ಮಂಗಳೂರು, ಆಗಸ್ಟ್ 1: ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕೊರೊನಾ ಪಾಸಿಟಿವ್ ಆಗಿದ್ದಾರೆ. ನಿನ್ನೆಯಷ್ಟೇ ಮಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಐವನ್ ಡಿಸೋಜರಿಂದಾಗಿ ಈಗ ಪತ್ರಕರ್ತರು ಮತ್ತು ಕಾಂಗ್ರೆಸ್ ನಾಯಕರಿಗೆ ಸಂಕಷ್ಟ ಎದುರಾಗಿದೆ.
ಈ ಬಗ್ಗೆ ಐವನ್ ಡಿಸೋಜ ಅವರಲ್ಲಿ ಮಾಹಿತಿ ಕೇಳಿದಾಗ, ಪಾಸಿಟಿವ್ ಆಗಿರುವುದನ್ನು ಖಚಿತಪಡಿಸಿದ್ದಾರೆ. ಎರಡು ದಿನಗಳ ಹಿಂದೆ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿದ್ದೆ. ನೆಗೆಟಿವ್ ಬಂದಿತ್ತು. ಹೀಗಾಗಿ ನಿನ್ನೆ ಡಿಕೆಶಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಆದರೆ ನಿನ್ನೆ ಸಂಜೆ ಏನೋ ಅನುಮಾನ ಬಂದು ಪುನಃ ಕೆಎಂಸಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದು ಇಂದು ಪಾಸಿಟಿವ್ ಬಂದಿದೆ. ಜೊತೆಗೆ ಪತ್ನಿಗೂ ಪಾಸಿಟಿವ್ ಆಗಿದೆ ಎಂದು ಐವನ್ ಡಿಸೋಜ ಹೇಳಿದ್ದಾರೆ.

ನಿನ್ನೆ ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಡಿಕೆಶಿ ಸುದ್ದಿಗೋಷ್ಟಿ ನಡೆದಿತ್ತು. ಸುದ್ದಿಗೋಷ್ಟಿಯಲ್ಲಿ ಐವನ್ ಡಿಸೋಜ, ಮಾಜಿ ಸಚುವರಾದ ಯು.ಟಿ.ಖಾದರ್, ರಮಾನಾಥ ರೈ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಿಥುನ್ ರೈ ವೇದಿಕೆ ಹಂಚಿಕೊಂಡಿದ್ದರು. ಎಸಿ ಕೊಠಡಿಯಲ್ಲಿ ಸುದ್ದಿಗೋಷ್ಟಿ ನಡೆದಿದ್ದರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪತ್ರಕರ್ತರು ಮತ್ತು ಕಾಂಗ್ರೆಸ್ ನಾಯಕರೆಲ್ಲ ಈಗ ಕ್ವಾರಂಟೈನ್ ಆಗಬೇಕಾಗಿದೆ.
ಇದಲ್ಲದೆ, ಐವನ್ ಡಿಸೋಜ ನಿನ್ನೆ ದಿನವಿಡೀ ಮಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಕಂಕನಾಡಿಯಲ್ಲಿ ಆಟೋ ರಿಕ್ಷಾ ಚಾಲಕರು ಮತ್ತು ಕಾರ್ಮಿಕರಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡಿದ್ದರು. ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯನ್ನೂ ನಡೆಸಿದ್ದರು.